ಬೆಂಗಳೂರು : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಲೋಕಾಯುಕ್ತರ ಬಲೆಗೆ ಬಿದ್ದಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಸರ್ಕಾರಿ ಅಧಿಕಾರಿ. ಲಂಚ ತಗೆದುಕೊಳ್ಳುವಾಗಲೇ ಆತ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾನೆ. 40% ಕಮಿಷನ್ಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ? ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ಸಿದ್ದರಾಮಯ್ಯ ಕಾಲದಲ್ಲಿ ಭ್ರಷ್ಟಾಚಾರ ಆಗಿತ್ತು ಎಂದು ಆರೋಪ ಮಾಡುತ್ತಾರೆ. ತಮ್ಮ ಮೇಲಿನ ಭ್ರಷ್ಟಾಚಾರ ಆರೋಪವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ಮೇಲೆ ಬಿಜೆಪಿಯವರು ಆರೋಪ ಮಾಡುತ್ತಾರೆ. ಇದರ ಬಗ್ಗೆ ಬಿಜೆಪಿ ಯಾಕೆ ತನಿಖೆ ನಡೆಸಲಿಲ್ಲ ಎಂದು ಸಿದ್ದರಾಮಯ್ಯ ಛೇಡಿಸಿದ್ದಾರೆ.
ಬೊಮ್ಮಾಯಿ ರಾಜೀನಾಮೆ ಕೊಡ್ಲಿ
ಲಂಚದ ಪ್ರಕರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ಸಾಕ್ಷ್ಯ ಕೇಳುತ್ತಾ ಇದ್ದರು. ಹಣ ಪತ್ತೆ ಬಗ್ಗೆ ಲೋಕಾಯುಕ್ತ ಅಧಿಕಾರಿಗಳೇ ಸಾಕ್ಷ್ಯ ಕೊಟ್ಟಿದ್ದಾರೆ. ಶಾಸಕರ ಕಚೇರಿ, ಮನೆಯಲ್ಲಿ ಲಕ್ಷಾಂತರ ರೂ. ಸಿಕ್ಕಿದೆ. ಹೀಗಾಗಿ, ಸಿಎಂ ಬಸವರಾಜ ಬೊಮ್ಮಾಯಿ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.