ಕಲಬುರಗಿ : ರಾಜ್ಯದಲ್ಲಿ ಬಿಸಿಲ ಝಳದ ನಡುವೆಯೇ ವಿಧಾನಸಭೆ ಹಂಗಾಮ ಬಿರುಸುಗೊಂಡಿದೆ. ಚುನಾವಣೆ ಘೋಷಣೆಗೆ ಮುನ್ನವೇ ಕುಕ್ಕರ್ ಪಾಲಿಟಿಕ್ಸ್ ಶುರುವಾಗಿದೆ. ಬಿಜೆಪಿ ಪಕ್ಷವೂ ಇದಕ್ಕೆ ಹೊರತಾಗಿಲ್ಲ ಎನ್ನುವುದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿ.
ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಕ್ಷೇತ್ರದ ಜನರಿಗೆ ಕುಕ್ಕರ್ ಆಮೀಷ ಒಡ್ಡಿ ಮತ ಭೇಟೆಗೆ ಇಳಿದಿದ್ದಾರೆ. ಬಿಜೆಪಿ ನಾಯಕರ ಕುಕ್ಕರ್ ಪಾಲಿಟಿಕ್ಸ್ ಇದೀಗ ಸಖತ್ ಸುದ್ದಿ ಮಾಡುತ್ತಿದೆ.
ಗೂಡ್ಸ್ ವಾಹನದಲ್ಲಿ ಸಾವಿರಾರು ಕುಕ್ಕರ್ ತುಂಬಿಕೊಂಡು ಬಂದು ಮತದಾರರಿಗೆ ಹಂಚ್ತಿದ್ದಾರೆ. ಸುನೀಲ್ ವಲ್ಯಾಪುರೆ ಭಾವಚಿತ್ರವುಳ್ಳ ರಟ್ಟಿನ ಬಾಕ್ಸ್‌ನಲ್ಲಿ ಕುಕ್ಕರ್ ಪ್ಯಾಕ್ ಮಾಡಲಾಗಿದೆ. ಕಾರ್ಯಕರ್ತರೊಂದಿಗೆ ಖುದ್ದು ವಲ್ಯಾಪುರೆ ಎದುರು ನಿಂತು ಮತದಾರರಿಗೆ ಕುಕ್ಕರ್ ಗೀಫ್ಟ್ ಕೊಡ್ತಿದ್ದಾರೆ.
ಗಿಫ್ಟ್ ಪಡೆಯಲು ಒಲ್ಲೆ ಎಂದ ಮಹಿಳೆಯರು
ಚಿತ್ತಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲಕರ್ಟಿ, ಲಾಡ್ಲಾಪುರ, ರಾವೂರ್, ನಾಲವಾರ್ ಸೇರಿದಂತೆ ವಿವಿಧೆಡೆ ಕುಕ್ಕರ್ ಗೀಫ್ಟ್ ನೀಡಿ ಎಲೆಕ್ಷನ್ ನಲ್ಲಿ ಬೆಂಬಲಿಸುವಂತೆ ಮನವಿ ಮಾಡ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಕುಕ್ಕರ್ ಗಿಫ್ಟ್ ಪಡೆಯಲು ಮಹಿಳೆಯರು ನಿರಾಕರಿಸಿದ್ದಾರೆ.
ಕಳೆದ ಬಾರಿ ಸುನೀಲ್ ಗೆ ಕೈ ತಪ್ಪಿದ್ದ ಟಿಕೆಟ್
ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಸರಾದ ಸುನೀಲ್ ವಲ್ಯಾಪುರೆ ಈ ಹಿಂದೆ ಚಿಂಚೋಳಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಕಳೆದಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಗುಡ್ ಬೈ ಹೇಳಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಲೋಕಸಭೆಗೆ ಆಯ್ಕೆಯಾದ ಸಂಸದ ಉಮೇಶ ಜಾಧವ ಪುತ್ರ ಅವಿನಾಶ ಜಾಧವ ಅವರಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು.
ಈ ಬಾರಿ ಚಿಂಚೋಳಿ ಕ್ಷೇತ್ರದಿಂದ ಟಿಕೆಟ್ ಸಿಗೋದಿಲ್ಲ ಅನ್ನೋದು ಪಕ್ಕಾ ಆಗುತ್ತಿದ್ದಂತೆ ಚಿತ್ತಾಪುರ ಕ್ಷೇತ್ರದ ಮೇಲೆ ವಲ್ಯಾಪುರೆ ಕಣ್ಣಿಟ್ಟಿದ್ದಾರೆ. ಹೀಗಾಗಿ, ಮತ ಭೇಟೆಗೆ ಕುಕ್ಕರ್ ಪಾಲಿಟಿಲ್ಸ್ ಶುರು ಮಾಡಿದ್ದಾರೆ. ಚಿತ್ತಾಪುರ ಕ್ಷೇತ್ರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸ್ಪರ್ಧಿಸುವ ಕ್ಷೇತ್ರ. ಹೀಗಾಗಿ, ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ವಲ್ಯಾಪುರೆ ಪ್ರಯತ್ನಿಸುತ್ತಿದ್ದಾರೆ.