ಸ್ಯಾಂಡಲ್ ವುಡ್ ನಟ, ಮಾಜಿ ಸಂಸದ ರೆಬಲ್ ಸ್ಟಾರ್ ಅಂಬರೀಶ್ (66) ವಿಧಿವಶರಾಗಿದ್ದಾರೆ.
ಉಸಿರಾಟ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರನ್ನು ಇಂದು ಸಂಜೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದಾರೆ.
ಬಹುಕಾಲದಿಂದ ಅಂಬರೀಶ್ ಅನಾರೋಗ್ಯದಿಂದ ಬಳಲುತ್ತಿದ್ದರು. ಸಿಂಗಾಪುರದಲ್ಲೂ ಚಿಕಿತ್ಸೆ ಪಡೆದು ಬಂದಿದ್ದರು. ಇಂದು ಸಂಜೆ 5 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 9.30ರ ಸುಮಾರಿಗೆ ಎಲ್ಲರನ್ನೂ ಅಗಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಂಡ್ಯ ಸಂಸದ ಶಿವರಾಮೇಗೌಡ, ನಟರಾದ ಪುನೀತ್ ರಾಜ್ಕುಮಾರ್, ಯಶ್ ಸೇರಿದಂತೆ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ನಾಗರಹಾವು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಖಳನಾಯಕನಾಗಿ ಸಿನಿರಂಗ ಪ್ರವೇಶಿಸಿ, ಹೀರೋ ಆಗಿ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಛಾಪುಮೂಡಿಸಿದ್ರು. ರಾಜಕಾರಣದಲ್ಲೂ ತನ್ನದೇ ಆದ ಹೆಸರು ಮಾಡಿದ್ದರು. ಇತ್ತೀಚೆಗೆ ಸಿನಿಮಾ ಮತ್ತು ರಾಜಕೀಯರಂಗ ಎರಡರಲ್ಲೂ ಸಕ್ರಿಯವಾಗಿರಲಿಲ್ಲ. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು.