ರಫೆಲ್ ವಿವಾದ ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿರೋದು ಗೊತ್ತಿರೋ ವಿಷಯವೇ. ಇದೀಗ ಈ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಯುದ್ಧ ವಿಮಾನಗಳ ಬೆಲೆಯ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.
ರಫೆಲ್ ಯುದ್ಧ ವಿಮಾನ ಬೆಲೆ ಕುರಿತು ಕಂಪ್ಲೀಟ್ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಹೇಳಿದೆ.
ಸುಪ್ರೀಂ ಸೂಚನೆಯಂತೆ ಕೇಂದ್ರ ಸರ್ಕಾರ 10 ದಿನಗಳ ಒಳಗಾಗಿ ಈ ಮಾಹಿತಿ ಸಲ್ಲಿಸಬೇಕಿದೆ. 59 ಸಾವಿರ ಕೋಟಿ ರೂಪಾಯಿ ಮೌಲ್ಯದ 36 ಯುದ್ಧ ವಿಮಾನಗಳನ್ನು ಫ್ರಾನ್ಸ್ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಈ ರಫೆಲ್ ಒಪ್ಪಂದದಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿರೋ ಎನ್ಡಿಎ ಸರ್ಕಾರ ಭಾರೀ ದೊಡ್ಡ ಪ್ರಮಾಣದ ಅವ್ಯವಹಾರ ನಡೆಸಿದೆ ಅಂತ ಎಂ.ಎಲ್. ಶರ್ಮಾ ಅನ್ನೋರು ಆರೋಪಿಸಿ, ಈ ಒಪ್ಪಂದದ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿ ಎಸ್.ಕೆ. ಕೌಲ್ ಮತ್ತು ಕೆ.ಎಂ ಜೋಸೆಫ್ ಅವರನ್ನು ಒಳಗೊಂಡ ಪೀಠವು ಅಕ್ಟೋಬರ್ 10 ರಂದು ಈ ಅರ್ಜಿ ವಿಚಾರಣೆ ನಡೆಸಿತ್ತು. ವಿಚಾರಣೆ ಬಳಿಕ ಒಪ್ಪಂದದ ಕುರಿತು ಮಾಡಲಾಗಿರೋ ಭ್ರಷ್ಟಾಚಾರ ಆರೋಪಗಳನ್ನು ಗಣನೆಗೆ ತೆಗೆದುಕೊಳ್ಳಲ್ಲ. ಆದ್ರೆ ಅಕ್ಟೋಬರ್ 29ರೊಳಗೆ ಈ ಒಪ್ಪಂದದ ನಿರ್ಧಾರ ಮತ್ತು ಪ್ರಕ್ರಿಯೆ ಬಗ್ಗೆ ವಿವರ ಸಲ್ಲಿಸುವಂತೆ ಸೂಚನೆ ನೀಡಿತ್ತು. ಕೇಂದ್ರ ಸರ್ಕಾರ ಸುಪ್ರೀಂ ಆದೇಶದಂತೆ ಅಕ್ಟೋಬರ್ 27ರಂದು ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡಿತ್ತು.
ಕೇಂದ್ರದ ವರದಿಯನ್ನು ಪರಿಶೀಲಿಸಿರೋ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ವಿಮಾನಗಳ ಬೆಲೆ ಕುರಿತು 10 ದಿನಗಳ ಒಳಗಾಗಿ ಮಾಹಿತಿ ನೀಡುವಂತೆ ಆದೇಶಿಸಿದೆ.