ಬೆಂಗಳೂರು: ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯ ಮತದಾರರ ಮಾಹಿತಿಯನ್ನ ಸರ್ವೆ ಮಾಡಿ ಚಿಲುಮೆ ಹಾಗೂ ಹೊಂಬಾಳೆ ಕಳವು ಮಾಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ನ ಘಟಾನುಘಟಿ ನಾಯಕರು ದಾಖಲೆ ಸಮೇತ ಆರೋಪಿಸಿದ ಹಿನ್ನಲೆಯಲ್ಲಿ ಬಿಬಿಎಂಪಿ ಕಡೆಗೂ ಎಚ್ಚೆತ್ತುಕೊಂಡಿದೆ.
ಇಂದು ಬಿಬಿಎಂಪಿ ಚಿಲುಮೆ ಸಂಸ್ಥೆ ಸಿಬ್ಬಂದಿ ಹಾಗೂ ಚಿಲುಮೆ ಸಂಸ್ಥೆಯ ಲೋಕೇಶ್ ಎಂಬಾತನ ವಿರುದ್ಧ ಕಾಡುಗೋಡಿ ಪೊಲೀಸರಿಗೆ ದೂಡು ನೀಡಿ ತನಿಖೆ ನಡೆಸುವಂತೆ ಕೇಳಿಕೊಂಡಿದೆ.
ಈ ಮೊದಲು ಬಿಬಿಎಂ ಮತದಾರರ ಮಾಹಿತಿ ಸಂಗ್ರಹಿಸಲು ಬಿಬಿಎಂಪಿ ಅನುಮತಿ ನೀಡಿತ್ತು. ಅಲ್ಲದೇ, ಬಿಬಿಎಂಪಿ ಮತಗಟ್ಟೆ ಸಮನ್ವಯಾಧಿಕಾರಿ ಎಂದು ಸಂಸ್ಥೆಯ ಸಿಬ್ಬಂದಿಗಳಿಗೆ ಐಡಿ ಕಾರ್ಡ್ ನೀಡಿದ್ದರು. ತದ ನಂತರದ ದಿನಗಳಲ್ಲಿ ಚಿಲುಮೆ ಸಂಸ್ಥೆಯಿಂದ ಬಿಬಿಎಂಪಿ ಗುರುತಿನ ಚೀಟಿ ದುರುಪಯೋಗ ಪಡಿಸಿಕೊಂಡಿದ್ದಲ್ಲದೇ, ನಕಲಿ ಐಡಿ ಕಾರ್ಡ್ ಚಿಲುವೆ ಸಿಬ್ಬಂದಿಗಳು ಬಿಎಲ್ಓ ಎಂದು ಸೃಷ್ಟಿಸಿಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಚಿಲುಮೆ ಸಂಸ್ಥೆ ಮನೆ, ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸಿದೆ. ಮತದಾರರ ಜಾಗೃತಿ ಹೆಸರಲ್ಲಿ ಖಾಸಗಿ ಮಾಹಿತಿ ಸಂಗ್ರಹಕ್ಕಿಳಿದಿದ್ದ ಚಿಲುಮೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಲುಮೆ ಸಂಸ್ಥೆಯ ಲೋಕೇಶ್ ವಿರುದ್ಧ ಬಿಬಿಎಂಪಿ ದೂರಿನಲ್ಲಿ ಮನವಿ ಮಾಡಿದೆ. ಇನ್ನು ಮತದಾರರ ಜಾಗೃತಿ ಬದಲು ಅಕ್ರಮ ಮಾಹಿತಿ ಸಂಗ್ರಹಕ್ಕೆ ಬಿಬಿಎಂಪಿ ಬ್ರೇಕ್ ಹಾಕಿದ್ದು, ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನ ನಿನ್ನೆ ರದ್ದುಗೊಳಿಸಿದೆ.