Friday, November 22, 2024

ರಹಸ್ಯಗಳ ಜಗತ್ತು.. ಪ್ರಕೃತಿಯ ವಿಸ್ಮಯಗಳ ಗಮ್ಮತ್ತಿನ ಗುಡಿ..!

ಅಭಿಮಾನದಲ್ಲಿ ಅಣ್ಣಾವ್ರನ್ನ ಮೀರಿಸಿದ ರಾಜರತ್ನ ಅಪ್ಪು, ಸಿನಿಯಾನದಲ್ಲಿ ರಾಜ್​ರ ಗಂಧದಗುಡಿಯನ್ನೂ ಮೀರಿಸೋ ಗುಡಿ ಕಟ್ಟಿಕೊಟ್ಟಿದ್ದಾರೆ. ಅಪರಿಚಿತ ಕರ್ನಾಟಕವನ್ನು ವಿಶ್ವಕ್ಕೆ ಪರಿಚಯಿಸೋ ಕರುನಾಡ ರಾಯಭಾರಿಯಾಗಿ ರಾರಾಜಿಸ್ತಿದ್ದಾರೆ ಅಪ್ಪು. ಪುನೀತ್​ರ ಆ ಅಮೋಘ ಜರ್ನಿಯನ್ನ ಕಂಡ ಕಲಾಭಿಮಾನಿಗಳು ಅಕ್ಷರಶಃ ಪುನೀತರಾಗಿದ್ದಾರೆ. ಹಾಗಾದ್ರೆ ಇದು ಡಾಕ್ಯುಮೆಂಟರಿನಾ ಅಥ್ವಾ ಸಿನಿಮಾನಾ..? ಡಾಕ್ಯೂ ಫಿಲ್ಮ್​ನ ಮಜಲುಗಳೇನು ಅನ್ನೋದ್ರ ಜೊತೆ ತಾರೆಯರು ಒಪ್ಪಿ, ಅಪ್ಪಿದ ಗಂಧದಗುಡಿಯನ್ನ ಅವ್ರ ಬಾಯಿಂದಲೇ ಕೇಳೋಣ ಬನ್ನಿ.

  • ತಾರೆಯರಿಂದ ಬಹುಪರಾಕ್.. ಅಭಿಮಾನಿಗಳ​ ಭಾವುಕ ನುಡಿ

ಪ್ರಿಯ ವೀಕ್ಷಕರೇ.. ಅಪ್ಪು ಬರೀ ವ್ಯಕ್ತಿ ಅಲ್ಲ, ಬಹುದೊಡ್ಡ ವ್ಯಕ್ತಿತ್ವಕ್ಕೆ ಕೈಗನ್ನಡಿಯಾದ ಕರುನಾಡಿನ ಅಗಾಧ ಶಕ್ತಿ. ಜೊತೆಗಿರದ ಜೀವ ಸದಾ ಜೀವಂತ ಅನ್ನೋದಕ್ಕಿಂತ ನೀರಿನಂತಹ ಜೀವ, ಎಂದೆಂದಿಗೂ ಜೀವಂತ ಅನ್ನಬಹುದು. ಕಾರಣ ಒಬ್ಬ ಸೂಪರ್ ಸ್ಟಾರ್ ಅನ್ನೋ ಪಟ್ಟವನ್ನು ಪಕ್ಕಕ್ಕಿಟ್ಟು, ಶ್ರೀಸಾಮಾನ್ಯನಾಗಿ ಕರ್ನಾಟಕದ ವನ್ಯ ಸಂಪತ್ತು, ಪ್ರಕೃತಿಯ ವಿಸ್ಮಯಗಳನ್ನ ತೆರೆಗೆ ತರುವ ಅವ್ರ ನಿರ್ಧಾರವೇ ಅದ್ಭುತ. ಹೀರೋ ಯಾರು ಅನ್ನೋ ಪ್ರಶ್ನೆಗೆ ಈ ಚಿತ್ರ ಉತ್ತರ ಕೊಡಲಿದೆ.

ಎರಡೂವರೆ, ಮೂರು ತಾಸಿನ ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಿಗಿಂತ ಭಿನ್ನವಾಗಿರೋ ಗಂಧದಗುಡಿ, ಜಸ್ಟ್ ಒಂದೂವರೆ ಗಂಟೆಯ ದೃಶ್ಯಚಿತ್ತಾರ. ಇದು ಡಾಕ್ಯುಮೆಂಟರಿನಾ..? ನೋ. ಸಿನಿಮಾನಾ..? ಅಫ್​ಕೋರ್ಸ್​ ಯೆಸ್. ಫೈಟ್, ಡ್ಯಾನ್ಸ್, ಮೇಕಪ್, ಲೈಟಿಂಗ್ ಇದ್ಯಾವುದರ ಗೋಜಿಲ್ಲದೆ ಸ್ವಾಭಾವಿಕ ಹಾಗೂ ಸಹಜ ಜರ್ನಿಯ ಚಿತ್ರಣ. ವನ್ಯ ಸಂಪತ್ತಿನ ರಹಸ್ಯಗಳ ಹೂರಣ.

ಅಪ್ಪು ಕಟ್ಟಿದ ಗುಡಿ, ಅಣ್ಣಾವ್ರ ಗಂಧದಗುಡಿಗಿಂತ ವಿಭಿನ್ನ ಹಾಗೂ ವಿಶಿಷ್ಟವಾಗಿದ್ದು, ಅದನ್ನು ಕಣ್ತುಂಬಿಕೊಂಡ ಅಭಿಮಾನಿ ದೇವರುಗಳು ಭಾವುಕವಾಗಿ ಮಾತನಾಡ್ತಿದ್ದಾರೆ. ಕಾರಣ ಅಪ್ಪು ಅನ್ನೋ ಎಮೋಷನ್. ಇದು ಫಸ್ಟ್ ಡೇ ಫಸ್ಟ್ ಶೋ ಅನ್ಬೇಕಾ ಅಥ್ವಾ ಲಾಸ್ಟ್ ಶೋ ಅನ್ಬೇಕಾ ಅನ್ನೋ ಕನ್ಫ್ಯೂಷನ್. ಅದೇನೇ ಇರಲಿ, ಗಂಧದಗುಡಿ ನಿಜಕ್ಕೂ ಅಭೂತಪೂರ್ವ ಅನುಭವಗಳ ಬುತ್ತಿ. ಅಮೋಘ ವರ್ಷ ಕಟ್ಟಿಕೊಟ್ಟ ಅಮೋಘವಾದ ಜಗತ್ತು.

ಅಶ್ವಿನಿ ಪುನೀತ್ ರಾಜ್​ಕುಮಾರ್​ರಿಂದ ಶುರುವಾಗೋ ಈ ಸಿನಿಮಾ, ಬೆಲೆಕಟ್ಟಲಾಗದ ಬೆಟ್ಟದ ಹೂವು ಮಗುವಿನ ನಗುವಿನಂತೆ ಅರಳಿ, ಗಂಧದಗುಡಿಯ ಬೃಹತ್ ಮರವಾಗಲಿದೆ. ಕರ್ನಾಟಕದ ಇತಿಹಾಸದ ಜೊತೆ ನಾಗರಹೊಳೆ, ಗಾಜನೂರು, ಹುಲಿಗಳ ನಾಡು ಚಾಮರಾಜನಗರ, ನೇತ್ರಾಣಿ ಐಲ್ಯಾಂಡ್, ಜೋಗ, ಮಲೆನಾಡು, ಆಗುಂಬೆ, ಬಳ್ಳಾರಿ, ತುಂಗಭದ್ರ, ಕಾಳಿ ನದಿ ಹೀಗೆ ಸಾಕಷ್ಟು ಭೌಗೋಳಿಕ ಪ್ರದೇಶಗಳ ವೈಶಿಷ್ಟ್ಯತೆಯ ಸಾಗರ ಈ ಗಂಧದಗುಡಿ.

  • ಅಡ್ವೆಂಚರ್ ಜರ್ನಿ ಜೊತೆ ಸಾಮಾಜಿಕ ಸಂದೇಶಗಳ ಸರಮಾಲೆ
  • ಅಪ್ಪು ಕನಸು ನನಸು ಮಾಡಿದ ಕಲಾಭಿಮಾನಿಗಳಿಂದ ಹೂಮಳೆ

ಯೆಸ್.. ನೋಡುಗರಿಗೆ ಇದು ನಿರ್ದೇಶಕ ಅಮೋಘ ವರ್ಷ ಜೊತೆ ಅಪ್ಪು ಅವ್ರ ಅಡ್ವೆಂಚರ್ ಜರ್ನಿ ಅನಿಸಿದ್ರೂ, ಪ್ರಕೃತಿಯ ಮಹತ್ವ ಸಾರಲಾಗಿದೆ. ಸ್ಕೂಬಾ ಡೈವ್​ನಲ್ಲಿ ಸಮುದ್ರದ ಆಳಕ್ಕೆ ಇಳಿದರೂ, ಅಲ್ಲಿ ಪ್ಲಾಸ್ಟಿಕ್ ಹೆಕ್ಕೋ ಅಪ್ಪು, ಪ್ಲಾಸ್ಟಿಕ್​ನ ಮಿತವಾಗಿ ಬಳಸಿ ಹೀರೋಗಳಾಗೋಣ ಅಂತಾರೆ. ಸೋಲಿಗ ಜನಾಂಗದ ಜೊತೆ ಬೆರೆತ ಅಪ್ಪು, ಅಲ್ಲಿ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಅನ್ನೋದನ್ನ ಮಕ್ಕಳಿಗೆ ಹೇಳಿಕೊಡ್ತಾರೆ. ನಮ್ಮ ಆಸೆಗಳನ್ನ ಕಡಿಮೆ ಮಾಡಿ, ಪ್ರಕೃತಿಯ ಮೇಲೆ ತೋರಿಸೋಣ ಅಂತ ಕಿವಿಮಾತು ಹೇಳ್ತಾರೆ.

ಕಾಳಿ ನದಿಯಲ್ಲಿ 150 ಮೀಟರ್ ಈಜುವ ಅಪ್ಪು, ಪ್ರತಿ ವರ್ಷ ಇಲ್ಲಿಗೆ ಬಂದೇ ಬರ್ತೀನಿ ಅಂತಾರೆ. ಆನೆ, ಹುಲಿ, ಕರಡಿ ಕಂಡು ಪುಳಕಿತರಾಗುವ ಅವ್ರು, ಹಾವಿಗೆ ಹೆದರಿ ಭಕ್ತ ಪ್ರಹ್ಲಾದ ಚಿತ್ರದ ಆನೆ, ಹಾವು ಪ್ರಸಂಗಗಳನ್ನ ಮೆಲುಕು ಹಾಕ್ತಾರೆ. 18 ಅಡಿ ಕಿಂಗ್ ಕೋಬ್ರಾ ರೆಸ್ಕ್ಯೂ ವೇಳೆ ನಿಮ್ಮನೆಗೆ ಹಾವು ಬಂದ್ರೆ ನಂಗೆ ಕಾಲ್ ಮಾಡಿ ಅಂತ ಜೋಕ್ ಮಾಡ್ತಾರೆ. ಕುರಿಗಾಹಿಗಳ ಜೊತೆ ರೊಟ್ಟಿ ಸವಿತಾರೆ. ಎಲಿಫೆಂಟ್ ಕಾರಿಡಾರ್ ಬಗ್ಗೆ ಜಾಗೃತಿ ಮೂಡಿಸ್ತಾರೆ. ನಿಜಕ್ಕೂ ಇವೆಲ್ಲಾ ಪದಗಳಲ್ಲಿ ಹಿಡಿದಿಡೋಕೆ ಸಾಧ್ಯವಾಗದ ಅವಿಸ್ಮರಣೀಯ ಪಯಣದ ಹೆಜ್ಜೆ ಗುರುತುಗಳು.

ಹಾವಿಗೆ ಹೆದರಿ, ರೀ.. ಮೂರು ಸಿನ್ಮಾ ಶೂಟಿಂಗ್ ನಡೀತಿದೆ. ಮನೇಲಿ ಹೆಂಡ್ತಿ ಮಕ್ಳು ಕಾಯ್ತಿರ್ತಾರೆ. ಸೇಫ್ ತಾನೇ ಅಂತ ಅಮೋಘ ವರ್ಷರನ್ನ ಕೇಳೋ ಮಾತು ನೋಡುಗರ ಹೃದಯ ಹಿಂಡಲಿದೆ. ಕಣ್ಣುಗಳನ್ನ ಒದ್ದೆಯಾಗಿಸಲಿದೆ. ಆದ್ರೆ ಅವ್ರ ಉದ್ದೇಶ, ದೂರದೃಷ್ಟಿ, ಆ ಅಭೂತಪೂರ್ವ ಅನುಭವಗಳು ನಿಜಕ್ಕೂ ವರ್ಣನಾತೀತ. ಚಿತ್ರರಂಗದ ತಾರೆಯರು ಕೂಡ ಸ್ಪೆಷಲ್ ಪ್ರೀಮಿಯರ್ ಶೋನಲ್ಲಿ ಗಂಧದಗುಡಿಯನ್ನ ಕಣ್ತುಂಬಿಕೊಂಡು, ಅಪ್ಪು ಅವ್ರ ಈ ಸಾಹಸವನ್ನು ಕೊಂಡಾಡಿದ್ರು.

ಬೈಟ್: ಸುಧಾಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷ

ಬೈಟ್: ರಮ್ಯಾ, ನಟಿ

ಬೈಟ್: ಸಂತೋಷ್ ಆನಂದ್​ರಾಮ್, ನಿರ್ದೇಶಕ

ಬೈಟ್: ಸಂಗೀತಾ ಶೃಂಗೇರಿ, ನಟಿ

ಬೈಟ್: ಕುನಾಲ್ ಗಾಂಜಾವಾಲಾ, ಗಾಯಕ

ಬೈಟ್: ಸುಧಾ ಬೆಳವಾಡಿ, ನಟಿ

ಬೈಟ್: ಗುರುಕಿರಣ್, ಗಾಯಕ

ಬೈಟ್: ರಿಷಿ, ನಟ

ಬೈಟ್: ಚೇತನ್ ಕುಮಾರ್, ನಿರ್ದೇಶಕ

ಇವರೆಲ್ಲಾ ಹೇಳಿದಂತೆ ಇದು ನಿಜಕ್ಕೂ ಕನ್ನಡ ಚಿತ್ರರಂಗದ ಮಟ್ಟಿಗೆ ಮೈಲಿಗಲ್ಲು. ಕನಿಷ್ಟ ನಾಲ್ಕು ಮಂದಿ ಇದನ್ನ ಥಿಯೇಟರ್​ನಲ್ಲಿ ಕಣ್ತುಂಬಿಕೊಂಡು, ಅರಣ್ಯ, ಪ್ರಾಣಿ & ಪಕ್ಷಿ ಸಂಕುಲಗಳ ಉಳಿವಿಗಾಗಿ ಮುಂದಾದ್ರೆ ಅದಕ್ಕಿಂತ ಸಾರ್ಥಕಭಾವ ಮತ್ತೊಂದಿರಲು ಸಾಧ್ಯವಿಲ್ಲ ಅನ್ನೋ ಅಪ್ಪು ಕನಸು ನಿಜಕ್ಕೂ ನನಸಾಗಿದೆ.

ಲಕ್ಷಾಂತರ ಮಂದಿ ನಯನಗಳು ಗಂಧದಗುಡಿಯ ಹೊನ್ನಿನ ಕಥೆಯನ್ನ ನೋಡಿವೆ. ಹೃದಯದಿಂದ ಅದನ್ನ ಪಾಲಿಸೋ ಭರವಸೆ ಕೂಡ ನೀಡಿವೆ. ಬಹುಶಃ ಅಪ್ಪು ಅವ್ರ ರೀತಿ ಉಳಿದ ಸೂಪರ್ ಸ್ಟಾರ್​ಗಳೂ ಸಾಮಾಜಿಕ ಕಳಕಳಿ ತೋರಿಸಿದ್ರೆ, ಮಹತ್ವದ ಬದಲಾವಣೆ ತರಬಹುದು. ನಮ್ಮ ನಾಡು, ನುಡಿ, ಜಲ, ಸಂಪತ್ತು, ಪರಂಪರೆಯನ್ನ ಮತ್ತಷ್ಟು ಪರಂಪರೆಗಳಿಗೆ ಜೀವಂತವಾಗಿ ಕೊಂಡೊಯ್ಯಬಹುದು. ಇಂತಹ ದೃಶ್ಯಗುಚ್ಚ ಕಟ್ಟಿಕೊಟ್ಟ ಅಪ್ಪುಗೆ ಶರಣು ಶರಣಾರ್ಥಿ. ಅವ್ರ ಆಶಯ ಜೀವಂತ, ಅವ್ರು ಸದಾ ಜೀವಂತ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES