ಶಿವಮೊಗ್ಗ; ಅಲ್ಲಿರೋದು ಬರೋಬ್ಬರಿ 128 ಮನೆಗಳು. ಕಳೆದ ಒಂದು ದಶಕದಿಂದ ನೆಮ್ಮದಿಯಿಂದ ಜನರಿಗೆ ಯಾವುದೇ ತೊಂದರೆಯಿರಲಿಲ್ಲ. ಪ್ಲಾಸ್ಟಿಕ್ ಹೂವು, ಅಲಂಕಾರದ ವಸ್ತುಗಳು, ರುದ್ರಾಕ್ಷಿ, ಮಣಿ ಹಾರಗಳು ಹೀಗೆ ವಿವಿಧ ವಸ್ತುಗಳನ್ನು ಮಾರಿ, ಬಂದ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ಜನರು ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸ ಮಾಡಿಕೊಂಡಿದ್ದರು. ಮಹಾನಗರ ಪಾಲಿಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು. ಮೆಸ್ಕಾಂ ವಿದ್ಯುತ್ ಸಂಪರ್ಕ ಒದಗಿಸಿತ್ತು. ಆದರೆ ಇಂದು ಸೋಮವಾರ ಅವರಿಗೆ ಶುಭಕರವಾಗಿರಲಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಆಗಮಿಸಿ ಮನೆಗಳ ತೆರವಿಗೆ ಮುಂದಾದರು. ಸ್ಥಳೀಯ ನಿವಾಸಿಗಳು ದಿಕ್ಕು ತೋಚದಂತಾದ್ರು. ಇದಕ್ಕೆ ಭಾರೀ ಪ್ರತಿಭಟನೆ ವ್ಯಕ್ತವಾಯ್ತು. ಇದಕ್ಕೆ ಮಣಿದ ಅಧಿಕಾರಿಗಳು 15 ದಿನಗಳ ಕಾಲಾವಕಾಶ ನೀಡಿ ವಾಪಸ್ಸಾದರು.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮಲ್ಲಿಗೇನಹಳ್ಳಿ ಬಳಿಯ ಅಂಬೇಡ್ಕರ್ ನಗರದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಇವತ್ತು ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ನಡುವೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ದರು. ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ್ದ ಜಾಗದಲ್ಲಿ ಅನಧಿಕೃತವಾಗಿ ಗುಡಿಸಲು ಹಾಕಿಕೊಂಡಿದ್ದರಿಂದ ಅಧಿಕಾರಿಗಳು ಮನೆಗಳ ತೆರವಿಗೆ ಹೈಕೋರ್ಟ್ನಿಂದ ಆದೇಶ ಪಡೆದಿದ್ದರು. ಸರ್ವೆ ನಂ. 18, 19 ಮತ್ತು 20ರ ಸುಮಾರು 8.29 ಎಕರೆ ಜಮೀನಿನಲ್ಲಿ 250 ಕ್ಕೂ ಹೆಚ್ಚು ಕುಟುಂಬಗಳು ಕಳೆದ 11 ವರ್ಷಗಳಿಂದ ವಾಸಿಸುತ್ತಿವೆ. ಸರ್ವೆ ನಂ.18ರಲ್ಲಿ ವಾಸಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದರೂ ಇವರು ತುಂಗಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಸರ್ವೆ ನಂ.19ರಲ್ಲಿ ಮನೆ ಕಟ್ಟಿಸಿಕೊಂಡಿರುವುದು ಕುತ್ತು ತಂದಿದೆ.
ಹೈಕೋರ್ಟ್ ಆದೇಶದ ಮೇರೆಗೆ ಕರ್ನಾಟಕ ನೀರಾವರಿ ನಿಗಮದ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಲು ಸುಮಾರು 128 ಮನೆಗಳ ತೆರವು ಕಾರ್ಯಾಚರಣೆಗೆ ಮುಂದಾದಾಗ ಸ್ಥಳೀಯರು ಪ್ರಬಲ ವಿರೋಧ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಜೆಸಿಬಿ ಮುಂದೆ ಮಲಗಿ ವಿರೋಧ ವ್ಯಕ್ತಪಡಿಸಿದರು. ನಮ್ಮ ಪ್ರಾಣ ತೆಗೆದು ಮನೆ ನೆಲಸಮ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ಕಡೆ ಸರ್ಕಾರ ವಾಸಿಸಲು ಎಲ್ಲ ಸವಲತ್ತು ಮಾಡಿಕೊಟ್ಟರೆ, ಇನ್ನೊಂದೆಡೆ ಅಧಿಕಾರಿಗಳು ಮನೆ ತೆರವಿಗೆ ಮುಂದಾಗಿದ್ದಾರೆ ಎಂದು ಅಳಲನ್ನು ತೋಡಿಕೊಂಡರು. ಇಲಾಖೆಯ ನೋಟಿಸ್ ಗೆ ಉತ್ತರ ನೀಡಿದ್ದರೂ ಏಕಾಏಕಿ ಯಾವುದೇ ಮುನ್ಸೂಚನೆ ಇಲ್ಲದೆ ತೆರವಿಗೆ ಬಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.
ಇನ್ನು ಅಂಬೇಡ್ಕರ್ ಕಾಲೋನಿಯ ವ್ಯಾಪ್ತಿಯಲ್ಲಿ ತುಂಗಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಬಫರ್ ಜೋನ್ ಪ್ರದೇಶದ ನಾಲ್ಕು ಮುಕ್ಕಾಲು ಎಕೆರೆ ಒತ್ತುವರಿಯಾಗಿದೆ ಎಂಬುದು ಆರೋಪ. ಈ ಸಂಬಂಧ ಈ ಹಿಂದೆಯೇ ನೋಟಿಸ್ ನೀಡಲಾಗಿದ್ದು, ಒತ್ತುವರಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ನಿವಾಸಿಗಳು ಸ್ಪಂದಿಸದಿದ್ದರಿಂದ ಅನಿವಾರ್ಯವಾಗಿ ಹೈಕೋರ್ಟ್ ಮೂಲಕ ಆದೇಶ ತರಬೇಕಾಯಿತು. ಜಾಗ ತೆರವುಗೊಳಿಸಿ ವರದಿ ನೀಡುವಂತೆ ಹೈಕೋರ್ಟ್ ಆದೇಶಿಸಿದೆ ಎಂದು ಅಧಿಕಾರಿಗಳು ಹೇಳಿದ್ರು ಕೂಡ ಪ್ರತಿಭಟನಾಕಾರರು ಒಪ್ಪಲೇ ಇಲ್ಲ.
ಸುಮಾರು ನಾಲ್ಕು ಗಂಟೆಗಳ ವಾದ, ವಾಗ್ವಾದ, ಮನವರಿಕೆ, ಪ್ರಹಸನದ ಬಳಿಕ ಕೊನೆಗೂ ಮಧ್ಯಾಹ್ನ ಅಧಿಕಾರಿಗಳು ಮನೆ ತೆರವಿಗೆ ಮುಂದಾದರು. ಈ ಸಂದರ್ಭ ಸ್ಥಳೀಯರು ತಡೆಯಲು ಮುಂದಾದರು. ಜೆಸಿಬಿ ಅಡಿ ಮಲಗಲು ಮುಂದಾದರು. ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಪೊಲೀಸರು ಪ್ರತಿರೋಧ ಒಡ್ಡಿದವರನ್ನು ವಶಕ್ಕೆ ಪಡೆದುಕೊಂಡು ತೆರವು ಕಾರ್ಯಾಚರಣೆಗೆ ಅವಕಾಶ ಮಾಡಿಕೊಟ್ಟರು. ಅಂತಿಮವಾಗಿ ಅಧಿಕಾರಿಗಳು ಪ್ರತಿಭಟನೆಗೆ ಮಣಿದು, ಖಾಲಿ ಇರುವ 8 ಮನೆಗಳನ್ನು ತೆರವುಗೊಳಿಸಿ, ಉಳಿದವರಿಗೆ 15 ದಿನದ ಕಾಲಾವಕಾಶ ನೀಡಿ ಅಲ್ಲಿಂದ ತೆರಳಿದರು.
ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ.