ಕಲಬುರಗಿ; ಇಡೀ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲೂ ದೊಡ್ಡಮಟ್ಟದ ಸದ್ದು ಮಾಡಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಡೀ ಪ್ರಕರಣದ ಕಿಂಗ್‌ಪಿನ್ ಆಗಿರೋ ಆರ್‌ಡಿ ಪಾಟೀಲ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ರಾಜ್ಯದ ಮಾನ ಮಾರ್ಯಾದೆ ಮೂರು ಕಾಸಿಗೆ ಹರಾಜು ಹಾಕಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ರಮದ ಪ್ರಮುಖ ರೂವಾರಿ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನ ಹಣಕಾಸಿನ ವಹಿವಾಟಿನ ಮೇಲೆ ಇದೀಗ ಸಿಐಡಿ ಅಧಿಕಾರಿಗಳು ಕೆಂಗಣ್ಣು ಬೀರಿದ್ದಾರೆ.
ಪರೀಕ್ಷಾ ಅಭ್ಯರ್ಥಿಗಳೊಂದಿಗೆ ಆರ್‌ಡಿ ಪಾಟೀಲ್ ಲಕ್ಷಾಂತರ ರೂಪಾಯಿ ಮಾಡಿಕೊಂಡು ಕೋಟಿ ಕೋಟಿ ರೂಪಾಯಿ ಹಣ ಸಂಪಾದಿಸಿದ ಪ್ರಕರಣ ಮತ್ತು ಆರ್‌ಡಿಪಿಯ ಹಣಕಾಸಿನ ವಹಿವಾಟಿನ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಕಲಬುರಗಿ ಸಿಐಡಿ ಅಧಿಕಾರಿಗಳು ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಈಗಾಗಲೇ ಸಿಐಡಿ ಅಧಿಕಾರಿಗಳು ಹಗರಣದ ತನಿಖೆ ನಡೆಸುತ್ತಿದ್ದು, ಹಲವೆಡೆ ಬ್ಯಾಂಕ್ ಅಕೌಂಟ್‌ಗಳನ್ನ ಪರಿಶೀಲನೆ ನಡೆಸಿದ್ದು, ಹಣಕಾಸಿನ ವಹಿವಾಟಿನ ಬಗ್ಗೆ ಸಮಗ್ರ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಇದರೊಂದಿಗೆ ಆರ್‌ಡಿ ಪಾಟೀಲ್‌ಗೆ ಅಷ್ಟೇ ಅಲ್ಲದೇ ಅಕ್ರಮಕ್ಕೆ ಜೈ ಎಂದಿದ್ದ ದಿವ್ಯಾ ಹಾಗರಗಿ ಸೇರಿದಂತೆ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಇಡಿ ತನಿಖೆ ಉರುಳಾಗಿ ಪರಿಣಮಿಸಿದ್ದರು ಅಲ್ಲಗೆಳೆಯುವಂತಿಲ್ಲ.
ಇನ್ನೂ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಮಧ್ಯವರ್ತಿಗಳ ಮೂಲಕ, ಅಧಿಕಾರಿಗಳ ಮೂಲಕ ಅಭ್ಯರ್ಥಿಗಳೊಂದಿಗೆ ಪಿಎಸ್‌ಐ ಪರೀಕ್ಷೆ ಪಾಸ್ ಮಾಡಿಸಲು ಡಿಲ್ ಕುದುರಿಸಿ ತಲಾ ಅಭ್ಯರ್ಥಿ ಬಳಿ 50 ರಿಂದ 90 ಲಕ್ಷ ರೂಪಾಯಿವರೆಗೆ ಹಣ ಪಡೆದಿದ್ದರ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಬಹಿರಂಗಪಡಿಸಿದ್ದರು. ಪಿಎಸ್‌ಐ ಪರೀಕ್ಷೆ ಹಗರಣ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನ ಕಲಬುರಗಿ ಆ್ಯಕ್ಸಿಸ್ ಬ್ಯಾಂಕ್ ಖಾತೆಗೆ ಮೇಲಿಂದ ಮೇಲೆ 10 ಲಕ್ಷ, 25 ಲಕ್ಷ, 50 ಲಕ್ಷ ಸೇರಿದಂತೆ ಬರೋಬ್ಬರಿ 2 ಕೋಟಿ ರೂಪಾಯಿ ಹಣ ಜಮಾವಣೆ ಆಗಿರುವ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ಹಿಗೇ ಅಕ್ರಮದಿಂದ ಬಂದ ಹಣದಿಂದ ಆರ್‌ಡಿ ಪಾಟೀಲ್ ವಿವಿಧೆಡೆ ಸೈಟ್‌ಗಳನ್ನ ಖರೀದಿ ಮಾಡಿ ಅಪಾರ ಪ್ರಮಾಣದ ಚಿನ್ನಾಭರಣವನ್ನ ಖರೀದಿ ಮಾಡಿದ್ದನು. ಇದರ ಜೊತೆಗೆ ವಿವಿಧೆಡೆ ಆರ್‌ಡಿ ಪಾಟೀಲ್ ಹತ್ತಾರು ಬ್ಯಾಂಕ್ ಅಕೌಂಟ್ ಹೊಂದಿದ್ದು, ಆ ಅಕೌಂಟ್‌ನಿಂದ ಸಹ ಎಷ್ಟು ಪ್ರಮಾಣದ ಹಣಕಾಸಿನ ವಹಿವಾಟು ನಡೆದಿದೆ, ಆ ಅಕೌಂಟ್‌ಗಳಿಗೆ ಯಾರೆಲ್ಲ ಹಣ ವರ್ಗಾವಣೆ ಮಾಡಿದ್ದಾರೆ ಎಂಬುದರ ಇದೀಗ ಇಡಿ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಅದೆನೇ ಇರಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ಅಧಿಕಾರಿಗಳು 50 ಕ್ಕೂ ಅಧಿಕ ಕುಳಗಳನ್ನ ಬಂಧಿಸಿ ಜೈಲಿಗಟ್ಟಿದ್ದು, ಇದೀಗ ಸಿಐಡಿ ಅಧಿಕಾರಿಗಳು ತನಿಖೆಯನ್ನ ಮತ್ತಷ್ಟು ಆಳಕ್ಕೆ ಒಯ್ಯಲು, ಆರ್‌ಡಿ ಪಾಟೀಲ್ ಹಣಕಾಸಿನ ವಹಿವಾಟಿನ ಬಗ್ಗೆ ಇಡಿ’ಗೆ ಪತ್ರ ಬರೆದಿರೋದು ಯಾವ ತಿರುವು ಪಡೆಯುತ್ತೊ ಮತ್ತು ಯಾರ‌್ಯಾರಿಗೆ ಉರುಳಾಗಿ ಪರಿಣಮಿಸುತ್ತೊ ಎಂಬುದು ತನಿಖೆ ಇಂದಷ್ಟೇ ತಿಳಿದುಬರಬೇಕಿದೆ.
ಅನಿಲ್‌ಸ್ವಾಮಿ. ಪವರ್ ಟಿವಿ, ಕಲಬುರಗಿ