ಬೆಂಗಳೂರು : ರಾಜ್ಯದಲ್ಲಿ ಭಾರತ್ ಜೋಡೊ ಎರಡನೇ ದಿನವಾದ ಶನಿವಾರ ಬೆಳಗ್ಗೆ 6.30ಕ್ಕೆ ಆರಂಭವಾಗಬೇಕಿದ್ದ ರಾಹುಲ್ ಗಾಂಧಿ ಪಾದಯಾತ್ರೆ ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಚಾಮರಾಜನಗರ ಜಿಲ್ಲೆಯ ತೊಂಡರವಾಡಿ ಗೇಟ್ ಬಳಿ ಆರಂಭವಾಯಿತು. ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಅನೇಕ ಮುಖಂಡರು ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ್ರು. ಕೆಲವು ದೂರ ನಡೆದ ನಂತರ ಸಿದ್ದರಾಮಯ್ಯ ವಿಶ್ರಾಂತಿಗೆಂದು ಕಾರ್ ಏರಿದ್ರೆ ಡಿಕೆ ಮಾತ್ರ ರಾಗಾ ಜೊತೆಯಲ್ಲೇ ನಂಜನಗೂಡಿನ ಕಳಲೆವರೆಗೂ ಸುಮಾರು 13 ಕಿಲೋಮೀಟರ್ ದೂರ ಹೆಜ್ಜೆ ಹಾಕಿದರು. ಬಳಿಕ ಮಧ್ಯಾಹ್ನದ ಊಟ ಮತ್ತು ವಿಶ್ರಾಂತಿ ಪಡೆದು ನಂತರ ಸಾಹಿತಿಗಳೊಂದಿಗೆ ಸಂವಾದ ನಡೆಸಿದ ರಾಹುಲ್, 4 ಗಂಟೆಗೆ ಪುನಃ ಪಾದಯಾತ್ರೆ ಆರಂಭ ಮಾಡಿದ್ರು.
ಇನ್ನೂ ಪಾದಯಾತ್ರೆಯಲ್ಲಿ ಪೇಸಿಎಂ ಟಿ ಷರ್ಟ್ ಧರಿಸಿ ಬಾವುಟ ಹಿಡಿದು ಸಾಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಸಿಂಧಗಿ ಮೂಲದ ಕಾರ್ಯಕರ್ತ ಅಕ್ಷಯ್ ಎಂಬಾತ ಶುಕ್ರವಾರದಿಂದಲೂ ಪಾದಯಾತ್ರೆಯಲ್ಲಿ ಪೇ ಸಿಎಂ ಟೀ ಶರ್ಟ್ ಧರಿಸಿ ಬಾವುಟ ಹಿಡಿದು ಹೆಜ್ಜೆ ಹಾಕುತ್ತಿದ್ದ. ಈ ಬಗ್ಗೆ ಬಿಜೆಪಿ ಮುಖಂಡರು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಹೀಗಾಗಿ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ್ರು. ಇನ್ನೊಂದೆಡೆ ಪಾದಯಾತ್ರೆ ನಡುವೆ ದಿಢೀರ್ ಅಂತಾ ರಾಗಾ ಸಿಂಧುವಳ್ಳಿ ಗೇಟ್ ಬಳಿಯಿರುವ ಉಪ್ಪಿನಕಾಯಿ ಕಾರ್ಖಾನೆಗೆ ತೆರಳಿ ಕಾಫಿ ಕುಡಿದ್ರು.ನಂತರ ಪಾದಯಾತ್ರೆ ಮುಂದುವರಿಸಿದ್ರು.
ಸಂಜೆ 4 ಗಂಟೆಗೆ ಕಳಲೆ ಬಳಿಯಿಂದ ಆರಂಭವಾದ ಪಾದಯಾತ್ರೆ ತಾಂಡವಪುರಕ್ಕೆ ತಲುಪಿ ಅಲ್ಲಿಯೇ ರಾಹುಲ್ಗಾಂಧಿ ವಾಸ್ತವ್ಯ ಹೂಡಿ ಭಾನುವಾರ ಗಾಂಧಿ ಜಯಂತಿಯ ಪ್ರಯುಕ್ತ ಮಹಾತ್ಮ ಗಾಂಧಿ ಭೇಟಿ ನೀಡಿದ್ದ ಬದನವಾಳು ಗ್ರಾಮದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದಲ್ಲಿ ಭಜನೆ ಮಾಡಿ ನಂತರ ತಾಂಡವಪುರದಿಂದ ಮೂರನೇ ದಿನದ ಪಾದಯಾತ್ರೆ ಆರಂಭಿಸಲಿದ್ದಾರೆ.
ಸುರೇಶ್ ಬಿ.ಪವರ್ ಟಿವಿ ಮೈಸೂರು