ನವದೆಹಲಿ: ಎಐಸಿಸಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಜಾರ್ಖಂಡ್ ಮಾಜಿ ಸಚಿವ ಕೆಎನ್ ತ್ರಿಪಾಠಿ ಅವರ ನಾಮಪತ್ರವನ್ನು ಶನಿವಾರ ತಿರಸ್ಕರಿಸಲಾಗಿದ್ದು, ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಎಐಸಿಸಿ ಅಧ್ಯಕ್ಷ ಚುನಾವಣೆ ಅ.17 ರಂದು ನಡೆಯಲಿದೆ. ನಿನ್ನೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರ ಶಶಿ ತರೂರ್, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಕೆಎನ್ ತ್ರಿಪಾಠಿ ನಾಮಪತ್ರ ಸಲ್ಲಿಸಿದ್ದರು.
ಈಗ ತ್ರಿಪಾಠಿ ಅವರ ಪ್ರೊಪೋಸರ್‌ವೊಬ್ಬರ ಸಹಿ ಹೊಂದಿಕೆಯಾಗದ ಕಾರಣ ಮತ್ತು ಇನ್ನೊಬ್ಬ ಪ್ರೊಪೋಸರ್ ಸಹಿಯನ್ನು ಪುನರಾವರ್ತನೆ ಮಾಡಿದ್ದರಿಂದಾಗಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ತಿಳಿಸಿದರು.
ಒಟ್ಟು 20 ನಮೂನೆಗಳನ್ನು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಸ್ವೀಕರಿಸಲಾಗಿದ್ದು, ಈ ಪೈಕಿ ನಾಲ್ಕನ್ನು ತಿರಸ್ಕರಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ 14, ಶಶಿ ತರೂರ್ 5 ಮತ್ತು ಕೆ.ಎನ್. ತ್ರಿಪಾಠಿ 1 ಅರ್ಜಿ ಸಲ್ಲಿಸಿದ್ದರು ಎಂದವರು ಮಾಹಿತಿ ನೀಡಿದರು.