ಬೆಂಗಳೂರು: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಹಿನ್ನಲೆಯಲ್ಲಿ ಪಿಎಸ್ಐ ಅಭ್ಯರ್ಥಿಗಳು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಗಳೂರಿನ ಶಿವಾನಂದ ವೃತ್ತದ ಕುಮಾರಕೃಪಾ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಆಗಮಿಸಿದ 100 ಕ್ಕೂ ಹೆಚ್ಚು ಪಿಎಸ್ ಐ ಅಭ್ಯರ್ಥಿಗಳು, ಸಿದ್ದರಾಮಯ್ಯ ಭೇಟಿ ಮಾಡಿ ಪಿಎಸ್ಐ ಬಗ್ಗೆ ಸದ್ಯ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಲು ಆಗಮಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರನ್ನ ಭೇಟಿಯಾಗಲು ಅನುಮತಿ ಕೇಳದೆ ಪಿಎಸ್ಐ ಅಭ್ಯರ್ಥಿಗಳು ಬಂದ ಕಾರಣಕ್ಕೆ ಪೊಲೀಸರು ಭೇಟಿಗೆ ಆಕ್ಷೇಪ ವ್ಯಕ್ತಪಡಿದ್ದಾರೆ. ಸಿದ್ದರಾಮಯ್ಯ ನಿವಾಸದ ಮುಂಭಾಗದ ಲಾನ್ ನಲ್ಲಿ ಪಿಎಸ್ಐ ಅಭ್ಯರ್ಥಿಗಳು ಕಾದು ಕುಳಿತಿದ್ದಾರೆ. ಸೆಕ್ಯೂರಿಟಿ ಕಾರಣ ನೀಡಿ ವಾಪಾಸ್ ತೆರಳುವಂತೆ ಪಿಎಸ್ಐ ಅಭ್ಯರ್ಥಿಗಳಿಗೆ ಪೊಲೀಸರು ಮನವೊಲಿಕೆ ಯತ್ನ ಮಾಡಿದ್ದಾರೆ.
ಆದರೆ, ಪೊಲೀಸರ ಮನವೊಲಿಕೆಗೆ ಬಗ್ಗದ ಪಿಎಸ್ಐ ಅಭ್ಯರ್ಥಿಗಳು, ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮಾತನಾಡಿಯೇ ಹೋಗುವುದಾಗಿ ಪಟ್ಟು ಹಿಡಿದು ಅಭ್ಯರ್ಥಿಗಳು ಕುಳಿತಿದ್ದಾರೆ.