ಹಾಸನ : ಪವಾಡ ಕ್ಷೇತ್ರವೆಂದೇ ಕರೆಸಿಕೊಳ್ಳೋ ಹಾಸನ ನಗರದ ಅಧಿದೇವತೆ, ಸಪ್ತಮಾತೃಕೆಯರ ಕ್ಷೇತ್ರ ಹಾಸನದ ಹಾಸನಾಂಬೆಯ ಜಾತ್ರಾಮಹೋತ್ಸವ ಅಕ್ಟೋಬರ್ 13 ಕ್ಕೆ ಚಾಲನೆಗೊಳ್ಳಲಿದೆ. ಆಶ್ವಯುಜ ಮಾಸದ ಪೌರ್ಣಮಿಯ ನಂತರ ಬರುವ ಮೊದಲ ಗುರುವಾರ ಗರ್ಭಗುಡಿಯ ಬಾಗಿಲು ತೆರೆದು, ಬಲಿಪಾಢ್ಯಮಿಯ ಮಾರನೆಯ ದಿನ ಗರ್ಭಗುಡಿ ಬಾಗಿಲು ಮುಚ್ಚುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ. ಅದರಂತೆ ಅಕ್ಟೋಬರ್ 13 ರಂದು ಗರ್ಭಗುಡಿಯ ಬಾಗಿಲು ತೆರೆದು, ಅಕ್ಟೋಬರ್ 27ಕ್ಕೆ ಬಾಗಿಲು ಮುಚ್ಚಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು, ಶಾಸಕ ಪ್ರೀತಂಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ದೇವಾಲಯ ಆಡಳಿತಾಧಿಕಾರಿ ಎಸಿ ಅವರನ್ನೊಳಗೊಂಡಂತೆ ಪೂರ್ವಭಾವಿ ಸಭೆ ನಡೆಸಿದ್ದು, ದೇವಾಲಯದ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲನೇ ದಿನ ಹಾಗೂ ಕೊನೆಯ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರೋದಿಲ್ಲ, ಇನ್ನು ಈ ಬಾರಿ ಒಂದು ದಿನ ಗ್ರಹಣ ಬಂದಿರೋದ್ರಿಂದ ಒಟ್ಟು ಮೂರು ದಿನಗಳು ಈ ಬಾರಿ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರೋದಿಲ್ಲ. ಕಳೆದ ಎರಡು ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಹಾಗಾಗಿ ಈ ಭಾರಿ ಹೆಚ್ಚಿನ ಭಕ್ತರ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಇದೆ.ಡಿಸಿ ಹಾಗೂ ಎಸ್ಪಿಯವರಿಗೆ ಮೊದಲನೇ ಜಾತ್ರಾ ಮಹೋತ್ಸವವಾಗಿರೋದು, ಒಂದು ರೀತಿಯ ಸವಾಲಾಗಿದೆ.ಏನೆಲ್ಲಾ ಅಗತ್ಯಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಡಿಸಿ ಹಾಗೂ ಎಸ್ಪಿ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದ್ದು, ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದೆಂದು ಜಿಲ್ಲಾಧಿಕಾರಿ ಅರ್ಚನಾ ಹೇಳಿದ್ರು.
ಜಾತ್ರಾ ಮಹೋತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂಗಳು, ಹಾಲಿ ಶಾಸಕರು ಸೇರಿ ಎಲ್ಲಾ ಪ್ರಮುಖ ಗಣ್ಯರನ್ನು ಆಹ್ವಾನಿಸಲು ಜಿಲ್ಲಾಡಳಿತ ತೀರ್ಮಾನ ಮಾಡಿದೆ. ಹಾಸನಂಬೆಯ ದರ್ಶನಕ್ಕೆ ರಾಜ್ಯ ಮಾತ್ರವಲ್ಲದೇ ಹೊರರಾಜ್ಯದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸೋದು ದೇವಿಯ ಪ್ರಸಿದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ.
ಸಚಿನ್ ಶೆಟ್ಟಿ ಪವರ್ ಟಿವಿ ಹಾಸನ.