ಚಿತ್ರದುರ್ಗ : ಅಂತೂ ಇಂತೂ FIR ಆಗಿ 1 ವಾರದ ಬಳಿಕ ಮುರುಘಾ ಶ್ರೀಗಳ ಬಂಧನವಾಗಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಿದ ಬಳಿಕ ಶ್ರೀಗಳು ಕೋರ್ಟ್ ಮುಂದೆ ಹಾಜರಾಗಲು ಹೈಡ್ರಾಮಾ ಮಾಡಿದ್ರು. ಖಡಕ್ ಸೂಚನೆ ನೀಡಿದ ನ್ಯಾಯಾಧೀಶೆ ಕೋಮಲಾ ಅವರು ಕೋರ್ಟ್ಗೆ ಆರೋಪಿ ಹಾಜರಾದ್ರೆ ಮಾತ್ರ ತೀರ್ಪು ನೀಡೋದಾಗಿ ಹೇಳಿದ್ರು. ಬಳಿಕ ಬಿಗಿ ಭದ್ರತೆಯಲ್ಲಿ ಪೊಲೀಸ್ ವಾಹನದಲ್ಲೇ ಜಿಲ್ಲಾಸ್ಪತ್ರೆಯಿಂದ ಕೋರ್ಟ್ಗೆ ಕರೆತರಲಾಯ್ತು.
ಈ ವೇಳೆ ತನಿಖಾಧಿಕಾರಿ ಅನಿಲ್ ಕುಮಾರ್ ಅವರು ಕಸ್ಟಡಿಗೆ ನೀಡುವಂತೆ ನ್ಯಾಯಧೀಶರ ಬಳಿ ಮನವಿ ಮಾಡಿಕೊಂಡರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೋಮಲಾ ಅವರು ಪೋಕ್ಸೋ ಪ್ರಕರಣದಲ್ಲಿ ಮೊದಲ ಆರೋಪಿಯಾದ ಡಾ. ಶಿವಮೂರ್ತಿ ಮುರುಘಾ ಶರಣರನ್ನು 3 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ರು.
ಜಡ್ಜ್ ಮುಂದೆ ಶ್ರೀಗಳು ಕೆಲವೊಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮ ಸಂಪ್ರದಾಯಕ್ಕೆ ತಕ್ಕಂತೆ ಊಟ ಬೇಕಿದೆ ಎಂದು ಮನವಿ ಮಾಡಿದ್ರು. ಯಾವುದೇ ಕಾರಣಕ್ಕೂ ಊಟೋಪಚಾರ ಬದಲಿಸಲ್ಲ. ಎಲ್ಲರಂತೆ ನಿಮಗೂ ಊಟ ನೀಡಲಾಗುತ್ತದೆ ಎಂದು ನ್ಯಾಯಾಧೀಶೆ ಕೋಮಲಾ ಸೂಚಿಸಿದ್ರು. ಈ ಬೆಳವಣಿಗೆಗಳ ಮಧ್ಯೆ ಕೋರ್ಟ್ಗೆ ಮುರುಘಾ ಶ್ರೀಗಳು ವೀಲ್ಹ್ ಚೇರ್ನಲ್ಲಿ ಆಗಮಿಸಿದ್ದು, ವಾಪಸ್ ತೆರಳುವಾಗ ನಡೆದುಕೊಂಡು ಹೋಗಿರೋದು ಅಚ್ಚರಿ ಮೂಡಿಸಿದೆ.
ಇದೇ ವೇಳೆ ಪೊಲೀಸರ ವಿರುದ್ಧ ನ್ಯಾಯಾಧೀಶರು ಗರಂ ಆದ ಘಟನೆಯೂ ನಡೆಯಿತು. ನಾವು ನೋಡಿದಾಗ ಫಿಟ್ & ಫೈನ್ ಆಗಿದ್ರು. ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗುವಂತಹದ್ದೇನಾಗಿದೆ. ಆರೋಪಿಯನ್ನ ಆಸ್ಪತ್ರೆಗೆ ಕರೆದೊಯ್ಯಲು ಅನುಮತಿ ಕೊಟ್ಟಿದ್ಯಾರು ಎಂದು ಪೊಲೀಸರ ವಿರುದ್ಧ ನ್ಯಾಯಧೀಶೆ ಕೋಮಲಾ ಅವರು ಫುಲ್ ಕ್ಲಾಸ್ ತೆಗೆದುಕೊಂಡರು.
ಕೋರ್ಟ್ಗೆ ಹಾಜರಾಗುವ ಮೊದಲು ಚಿತ್ರದುರ್ಗದಲ್ಲಿನ ಬೆಳವಣಿಗೆ ಗಮನಿಸೋದಾದ್ರೆ, ಲೈಂಗಿಕ ಕಿರುಕುಳ ಆರೋಪದಲ್ಲಿ A1 ಆರೋಪಿಯಾಗಿ ಬಂಧನವಾಗಿ ಜೈಲು ಸೇರಿರುವ ಶಿವಮೂರ್ತಿ ಶರಣರು ಐದು ಗಂಟೆಗಳು ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ರು. ಬೆಳಗಿನ ಜಾವ ಉಪಹಾರ ಸೇವಿಸಿದ ನಂತರ ಏಕಾಏಕಿ ಎದೆನೋವು ಕಾಣಿಸಿಕೊಂಡ ಕಾರಣ ಶ್ರೀಗಳನ್ನ ಬಿಗಿ ಭದ್ರತೆಯಲ್ಲಿ ಕೂಡಲೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯ್ತು. ಮುರುಘಾ ಶ್ರೀಗಳು ವೈದ್ಯರಿಗೆ ನೀಡಿರುವ ಮಾಹಿತಿಯಂತೆ ತಮಗೆ ಹಿಂದಿನಿಂದಲೂ ಸೊಂಟ ನೋವು, ಬೆನ್ನು ನೋವು, ಬಿಪಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದೆಯಂತೆ. ದಾವಣಗೆರೆಯ SS ಆಸ್ಪತ್ರೆಯಿಂದ ಆಗಮಿಸಿದ ವೈದ್ಯರು ಜಿಲ್ಲಾಸ್ಪತ್ರೆಯಲ್ಲಿ ECG, ECHO ಟೆಸ್ಟ್ ಮಾಡಿ, ICUಗೆ ಶಿಫ್ಟ್ ಮಾಡಿದ್ದರು.
ಒಟ್ಟಿನಲ್ಲಿ ಅನಾರೋಗ್ಯ ನೆಪದಲ್ಲಿ ಬೆಂಗಳೂರಿಗೆ ತೆರಳಲು ಹೈಡ್ರಾಮಾ ಮಾಡಿದ ಶಿವಮೂರ್ತಿ ಶರಣರಿಗೆ ಚಿತ್ರದುರ್ಗ ನ್ಯಾಯಾಲಯದಲ್ಲಿ ಭಾರೀ ಹಿನ್ನಡೆಯಾಗಿದೆ. ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸಿದೆ.
ಮಲ್ಲಿಕ್ ಬೆಳಗಲಿ ಪವರ್ ಟಿವಿ ಚಿತ್ರದುರ್ಗ