ಬೆಂಗಳೂರು : ತೋಟಗಾರಿಕೆ ಸಚಿವ ಮುನಿರತ್ನ ಸುತ್ತಾ ಕಮಿಷನ್ ವ್ಯವಹಾರ ಆರೋಪ ಗಿರಕಿ ಹೊಡೆಯುತ್ತಿದೆ. ಪವರ್ ಟಿವಿ ಸ್ಟಿಂಗ್ನಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವ್ರು ಪ್ರಮುಖ ಸಚಿವರ ಪರ್ಸೆಂಟೇಜ್ ವ್ಯವಹಾರದ ಬಗ್ಗೆ ಮಾತನಾಡಿದ್ರು. ಅದ್ರಲ್ಲೂ ಸಚಿವ ಮುನಿರತ್ನಂ ಎಲ್ಲರಿಗಿಂತ ಭ್ರಷ್ಟ ಸಚಿವ. ಅವರನ್ನು ನೋಡಿ ಇತರೆ ಸಚಿವರೂ ಕಮಿಷನ್ ಪಡೆಯುತ್ತಿದ್ದಾರೆ ಅಂತಾ ಹೇಳಿದ್ರು.ಪವರ್ ಟಿವಿ ಸ್ಟಿಂಗ್ ನಲ್ಲಿ ಕೆಂಪಣ್ಣ ಬಿಚ್ಚಿಟ್ಟಿದ್ದ ಸ್ಪೋಟಕ ವಿಚಾರಗಳು ಸರ್ಕಾರದ ಬುಡವನ್ನೇ ಅಲ್ಲಾಡಿಸ್ತಿದೆ. ಈಗ ಮುನಿರತ್ನಂ ವಿರುದ್ಧ ಹನಿ ನಿರಾವರಿ ಸಂಘ ಗಂಭೀರ ಆರೋಪ ಮಾಡಿದೆ. ರೈತರಿಗೆ ನೀಡುವ ಹನಿ ನೀರಾವರಿ ಉಪಕರಣಗಳ ಸಬ್ಸಿಡಿಯಲ್ಲೂ ಮುನಿರತ್ನ ಕಮಿಷನ್ ಪಡೆಯುತ್ತಿದ್ದಾರಂತೆ. ಇಷ್ಟೂ ದಿನ ಡೀಲರ್ ಗಳಿಂದ ರೈತರಿಗೆ ಉಪಕರಣಗಳು ತಲುಪುತ್ತಿದ್ವು. ಈಗ ಸಚಿವರು ಕಂಪನಿಗಳಿಂದಲೇ ನೇರವಾಗಿ ಎಂಟೂವರೆ ಪರ್ಸೆಂಟ್ ಪಡೆಯುತ್ತಿದ್ದಾರೆ. ಕಂಪನಿಗಳಿಗೆ ಅಪ್ರೂವಲ್ ನೀಡಲು 15 ಲಕ್ಷಕ್ಕೆ ಡಿಮ್ಯಾಂಡ್ ಮಾಡ್ತಿದ್ದಾರೆ ಅಂತಾ ಹನಿ ನೀರಾವರಿ ಸಂಘದವ್ರು ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವ್ರಿಗೂ ಪತ್ರ ಬರೆದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನು ರೈತರಿಗೆ ವಿತರಿಸಿದ ಉಪಕರಣಗಳ ಸಬ್ಸಿಡಿ ಹಣವನ್ನು ಕಂಪನಿಗಳೇ ಕಡಿತ ಮಾಡಿಕೊಳ್ತಿವೆ. ಇದನ್ನು ಪ್ರಶ್ನೆ ಮಾಡಿದ್ರೆ ಸಚಿವರಿಗೆ ಪರ್ಸೆಂಟೇಜ್ ಕೊಡ್ಬೇಕು ಅಂತಾ ಉತ್ತರ ನೀಡ್ತಾ ಇದ್ದಾರಂತೆ. ಈ ಬಗ್ಗೆ ಸಿಎಂ ಬೊಮ್ಮಾಯಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವ್ರಿಗೆ ಪತ್ರ ಬರೆದಿದ್ದಾರೆ. ಹನಿ ನೀರಾವರಿಗೆ 500 ಕೋಟಿ ಮಾತ್ರ ಅನುದಾನ ಸಿಗುತ್ತೆ ಸಚಿವರು ಅದ್ರಲ್ಲೂ ಕಮಿಷನ್ ಪೀಕುತ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಬಿಜೆಪಿ ಸರ್ಕಾರದಲ್ಲಿ ನಡೀತಿರೋ ಕಮಿಷನ್ ವ್ಯವಹಾರದ ಬಗ್ಗೆ ಮೋದಿ ಅದ್ಯಾವಾಗ ಕೆರಳುತ್ತಾರೋ ಗೊತ್ತಿಲ್ಲ. ಅಂದು ಎಸ್ ಬಿಎಂ ಭ್ರಷ್ಟಾಚಾರದ ಬಗ್ಗೆ ಮೋದಿ ಗುಡುಗಿದ್ರು. ಈಗ ಅದೇ ಎಸ್ ಬಿಎಂ ಮೇಲೆ ಗಂಭೀರ ಆರೋಪಗಳು ಕೇಳಿ ಬರ್ತಿವೆ. ಕಮಿಷನ್ ದಂಧೆಯಲ್ಲಿ ಮೊದಲ ವಿಕೆಟ್ ಪತನ ಆದ್ರೂ ಆಗಬಹುದು. ಆದ್ರೆ ಮುನಿರತ್ನಂ ಅವ್ರು ಮಾತ್ರ ತಮ್ಮ ಮೇಲಿನ ಆರೋಪಗಳನ್ನು ಸರಾಗವಾಗಿ ತಳ್ಳಿ ಹಾಕ್ತಿದ್ದಾರೆ.
ಒಟ್ನಲ್ಲಿ ಮೋದಿ ಭೇಟಿಗೆ ಸಿದ್ಧತೆ ನಡೆಯುತ್ತಿರುವಾಗಲೇ ಸಚಿವರ ಕಮಿಷನ್ ದಂಧೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಮುನಿರತ್ನಂ ಅವ್ರನ್ನು ಬೊಮ್ಮಾಯಿ ಸಂಪುಟದಿಂದ ಹೊರಕ್ಕೆ ಹಾಕಬಹುದು ಅನ್ನೋ ಮಾತುಗಳೂ ಕೇಳಿಬರ್ತಿವೆ. ಅದೇನೇ ಇದ್ರೂ ರೈತರ ಸಬ್ಸಿಡಿಯಲ್ಲೂ ಹಣ ಪೀಕುತ್ತಿದ್ದಾರೆ ಎಂದ್ರೆ, ಇವ್ರಿಗಿಂತ ಬೇರೊಬ್ಬ ಕಮಿಷನ್ ಪಿಶಾಚಿ ಇರಲಿಕ್ಕಿಲ್ಲ.
ಆನಂದ್ ನಂದಗುಡಿ ಸ್ಪೆಶಲ್ ಪವರ್ ಟಿವಿ ಬೆಂಗಳೂರು