ಬೆಂಗಳೂರು : ಚಾಮರಾಜಪೇಟೆಯ ಮೈದಾನ ಒಂದಲ್ಲಾ ಒಂದು ಕಾರಣದಿಂದ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ಮೈದಾನದ ಮಾಲೀಕತ್ವ ವಿಚಾರಕ್ಕೆ ಪ್ರಾರಂಭವಾದ ಜಟಾಪಟಿ ಇದೀಗ ಗಣೇಶೋತ್ಸವ ಆಚರಣೆವರೆಗೂ ಬಂದು ನಿಂತಿದೆ. ಈದ್ಗಾ ಮೈದಾನ ನಮ್ದು, ಗಣೇಶೋತ್ಸವ ಆಚರಣೆಗೆ ಅವಕಾಶ ಮಾಡಿಕೊಡುವುದಿಲ್ಲ ಎನ್ನುತ್ತಿದ್ದ ಮುಸ್ಲಿಂ ಸಂಘಟನೆಗಳಿಗೆ ಹೈಕೋರ್ಟ್‌ನ ಆದೇಶ ಆಘಾತ ತಂದಿದೆ. ಹೈಕೋರ್ಟ್ ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ, ಇತ್ತ ರಾಜ್ಯ ಸರ್ಕಾರ ಕೂಡ ಫುಲ್ ಆಕ್ಟಿವ್ ಆಗಿದೆ. ಸಿಎಂ ರೇಸ್ ಕೋರ್ಸ್ ನಿವಾಸದಲ್ಲಿ, ಕಂದಾಯ, ಬಿಬಿಎಂಪಿ ಹಾಗು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಆರ್.ಅಶೋಕ್, ಗಣೇಶೋತ್ಸವ ಸಕ್ಸಸ್ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇನ್ನು ಗಣೇಶೋತ್ಸವ ಆಚರಣೆ ಸಂಬಂಧ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಆರ್ ಅಶೋಕ್, ಕೆಲ ಸೂಚನೆ ನೀಡಿದ್ದಾರೆ. ನಾವು ಕಾರ್ಯಕ್ರಮದ ಉಸ್ತುವಾರಿಯನ್ನ ನೇರವಾಗಿ ವಹಿಸಿಕೊಂಡ್ರೆ ಕೆಟ್ಟ ಸಂದೇಶ ಹೋಗಲಿದೆ. ಹೀಗಾಗಿ, ಯಾರ್ಯಾರಿಗೆ ಮೈದಾನದಲ್ಲಿ ಗಣೇಶ್ ಕೂರಿಸಬೇಕು ಅನ್ನುವವರು ಅರ್ಜಿ ಕೊಡಲಿ ಎಂದು ಆಹ್ವಾನ ನೀಡಿದ್ದಾರೆ. ಅಲ್ದೇ ಈದ್ಗಾ ಮೈದಾನದಲ್ಲಿ ಯಾವ್ ರೀತಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡಿ ಸಕ್ಸಸ್ ಮಾಡಿದ್ದೇವೋ, ಅದೇ ರೀತಿ ಚಾಣಕ್ಯ ರೀತಿಯಲ್ಲಿ ಗಣೇಶೋತ್ಸವ ಕಾರ್ಯಕ್ರಮ ಯಶಸ್ವಿ ಮಾಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಹಿಂದೂಪರ ಸಂಘಟನೆಗಳಿಗೆ ಆಹ್ವಾನ ನೀಡಿ, ಬೃಹತ್ ರ್ಯಾಲಿ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ.
ಇನ್ನು ಹೈಕೋರ್ಟ್ ಆದೇಶ ಪ್ರಶ್ನಿಸಿ, ಸುಪ್ರೀಂ ಮೊರೆ ಹೋಗಲು ಮುಸ್ಲಿಂ ಸಂಘಟನೆಗಳು ನಿರ್ಧಾರ ಮಾಡಿವೆ. ಈ ಬಗ್ಗೆ ನಡೆದ ಹೈವೋಲ್ಟೆಜ್ ಸಭೆಯಲ್ಲೂ ಚರ್ಚೆ ನಡೆದಿದೆ. ವಿವಾದಿತ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ವಿರೋಧ ಮಾಡಿದ್ದ ಜಮೀರ್ ಅಹ್ಮದ್ ವಿರುದ್ಧ ಆರ್.ಅಶೋಕ್ ಕೆಂಡಾ ಮಂಡಲವಾಗಿದ್ದಾರೆ. 75 ವರ್ಷಗಳಿಂದಲೂ ಈ ಮೈದಾನದಲ್ಲಿ ಫ್ಲ್ಯಾಗ್ ಹಾರಿಸಿಲ್ಲ. ಇವರೆಲ್ಲ ವಿರೋಧ ಮಾಡಿದ್ದರು. ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗುತ್ತಾ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.
ಇನ್ನು ಕೇವಲ ಗಣೇಶ ಕೂರಿಸೋದು ಅಲ್ಲ. ಚಾಮರಾಜಪೇಟೆಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ, ಹಿಂದೂ ಪರ ಸಂಘಟನೆಗಳಿಗೆ ಆಹ್ವಾನ ನೀಡುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ. ಒಟ್ಟಾರೆ, ವಿವಾದಿತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಬಗ್ಗೆ ಸರ್ಕಾರ ತೆರೆಮರೆಯಲ್ಲಿ ಕಸರತ್ತು ನಡೆಸಿದೆ.
ಗೋವಿಂದ್, ಪೊಲಿಟಿಕಲ್ ಬ್ಯುರೋ,ಪವರ್