ಬೆಂಗಳೂರು: ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ತಮ್ಮ ಎಲ್ಲಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ನೋಡಿ ಬೇಸರ ಆಗಿದೆ. ಐದು ದಶಕಗಳ ಕಾಲ ಪಕ್ಷ ಸಂಘಟನೆ ಮಾಡಿದ್ದಾರೆ. ಪಕ್ಷವೂ ಕೂಡ ಅವರ ನಿರೀಕ್ಷೆಗೂ ಮೀರಿ ಅವಕಾಶ ಕೊಟ್ಟಿದೆ ಎಂದರು.
ಅಧಿಕಾರದಲ್ಲಿರುವ ಕೋಮುವಾದಿ ಪಕ್ಷ ಸಂವಿಧಾನದ ಆಶಯಗಳ ಮೇಲೆ ಅಲ್ಪಸಂಖ್ಯಾತ, ದೀನ ದಲಿತರ ಮೇಲೆ ಹಲ್ಲೆ ನಡೆಸುತ್ತಿದೆ. ಇದರ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶ ಒಗ್ಗೂಡಿಸುವ ಕೆಲಸ ನಡೆಯುತ್ತಿದೆ. ಆದರೆ ಈ ವೇಳೆ ಹಿರಿಯ ನಾಯಕರು ರಾಜೀನಾಮೆ ನೀಡಿರುವುದು ಬೇಸರ ತರಿಸಿದೆ.
ಕೇಂದ್ರ ಸರ್ಕಾರ ವಿರುದ್ಧ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ 3500 ಕಿಲೋ ಮೀಟರ್ ಪಾದಯಾತ್ರೆ ಆಯೋಜನೆ ಮಾಡಲಾಗಿದೆ. ಇಂತಹ ಸಂದರ್ಭಗಳಲ್ಲಿ ಪಕ್ಷ ಬಿಟ್ಟು ಹೋಗುವುದು, ಕೋಮುವಾದಿಗಳ ವಿರುದ್ಧದ ಹೋರಾಟ ದುರ್ಬಲಗೊಳಿಸಿದಂತೆ ಮಾಡಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಸಮಯದಲ್ಲಿ ಬಿಟ್ಟು ಹೋದ್ರೆ ಅವರ ಬದ್ಧತೆಯ ಮೇಲೆ ಪ್ರಶ್ನೆ ಮೂಡುತ್ತದೆ. ಅಲ್ಲದೆ ಪರೋಕ್ಷವಾಗಿ ಕೋಮುವಾದಿ ಶಕ್ತಿಗಳಿಗೆ ಸಹಕರಿಸುತ್ತಿದಂತಾಗುತ್ತದೆ ಎಂದು ಗುಲಾಂ ನಬಿ ಆಜಾದ್ ಮೇಲೆ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.