ಬೆಂಗಳೂರು: ರಾಜ್ಯ ಸರ್ಕಾರದ 40% ವಿರುದ್ಧ ಗುತ್ತಿಗೆದಾರ ಕೆಂಪಣ್ಣ ಆರೋಪ ವಿಚಾರವಾಗಿ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಗುತ್ತಿಗೆದಾರ ಕೆಂಪಣ್ಣ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಲ್ಲೇ ಸುದ್ದಿಗೋಷ್ಠಿ ನಡೆಸಿರುವುದರಿಂದ ಇದರ ಗಾಂಭೀರ್ಯತೆ ಎಷ್ಟಿದೆ ಅಂತಾ ಗೊತ್ತಾಗುತ್ತದೆ. ಹಿಂದಿನಂತೆಯೇ ತಳ ಬುಡ ಇಲ್ಲದ ಆರೋಪವನ್ನ ರಾಜ್ಯ ಸರ್ಕಾರದ ಮೇಳೆ ಮಾಡಿದ್ದಾರೆ. ಅವರು ದಾಖಲೆಗಳನ್ನು ಕೊಡಲು ಸಿದ್ಧವಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇಲ್ಲ ಎಂದರು.
ಈ ಆರೋಪ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೇಳಿಕೆಗಳ ಝೆರಾಕ್ಸ್ ಕಾಪಿ ಆಗಿದೆ. ಪ್ರತಿ ನಿತ್ಯ ಸಾವಿರಾರು ಪತ್ರಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಹೋಗುತ್ತದೆ. ಕರಿಯಣ್ಣ, ಬಿಳಿಯಣ್ಣ ಎಲ್ಲರ ಪತ್ರವೂ ಹೋಗುತ್ತದೆ. ಕೆಂಪಣ್ಣನ ಪತ್ರವೂ ಹೋಗಲಿ, ಕೆಂಪಣ್ಣ ಆರೋಪಕ್ಕೆ ಗಂಭೀರತೆಯೇ ಉಳಿದಿಲ್ಲ. ನಮಗೆ ಮುಜುಗರದ ಪ್ರಶ್ನೆಯೇ ಇಲ್ಲ. ನಮ್ಮಲ್ಲಿ ಪರ್ಸಂಟೇಜ್ ಇಲ್ಲ, ಅದು ಕಾಂಗ್ರೆಸ್ ನಲ್ಲಿ ಇದೆ ಎಂದು ತಿಳಿಸಿದರು.
ಇಂದು ಬೆಳಿಗ್ಗೆ ಸಿದ್ದರಾಮಯ್ಯ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಮತ್ತೊಮ್ಮೆ 40% ಕಮಿಷನ್ ಆರೋಪ ಮಾಡಿದ್ದರು. ಕೆಂಪಣ್ಣ ಸರ್ಕಾರದ ಸಂಪೂರ್ಣ ವ್ಯವಸ್ಥೆಯೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಡಿದು ಸಚಿವರುಗಳು, ಶಾಸಕರು ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.