ಕನ್ನಡದ ದೇಸಿ ಜಾನಪದ ಕಲೆಯಾಗಿರುವ ಡೊಳ್ಳಿನ ಸದ್ದಿಗೆ ನ್ಯಾಷನಲ್ ಲೆವೆಲ್ನಲ್ಲಿ ಪ್ರಶಸ್ತಿಗಳ ಸುರಿಮಳೆಯಾಯ್ತು. ದೇಶ ವಿದೇಶಗಳಲ್ಲಿ ಸಾಲು ಸಾಲು ಪ್ರಶಸ್ತಿಗಳನ್ನ ರಿಲೀಸ್ಗೂ ಮೊದಲೇ ಬಾಚಿ ತನ್ನ ತೆಕ್ಕೆಗೆ ಹಾಕಿಕೊಳ್ತು ಡೊಳ್ಳು. ಸಿನಿಮಾದ ಆಳ, ಜೀವಾಳ ಏನು ಅನ್ನೋ ಕ್ಯೂರಿಯಾಸಿಟಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ. ಡೊಳ್ಳಿನ ನಾದ ನಿನಾದಕ್ಕೆ ತಲೆದೂಗೋ ಸಮಯ ಹತ್ತಿರವಾಗಿದೆ.
ಡೊಳ್ಳಿನ ಸದ್ದಿಗೆ ವಿಶ್ವಮಟ್ಟದಲ್ಲಿ ಸಿನಿದುನಿಯಾ ಬೆರಗು
ಕನ್ನಡ ಸಿನಿಮಾಗಳು ಇಡೀ ವಿಶ್ವವೇ ಬೆರಗಾಗುವಂತೆ ಮಾಡುತ್ತಿವೆ. ಬಾಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಿವೆ. ಕಥೆಗಳನ್ನು ಚ್ಯೂಸ್ ಮಾಡೋವಾಗ ತೋರುವ ಜಾಣತನ, ಸಿನಿಮಾಗಳ ಮೇಕಿಂಗ್ ಸ್ಟೈಲ್, ಜನರೇಷನ್ಗೆ ತಕ್ಕಂತೆ ತಾಜಾತನದ ಸಮಾಚಾರವನ್ನು ಹೇಳುವ ವಿಚಾರಗಳಲ್ಲಿ ಪರಭಾಷೆಗಳಿಗಿಂತ ಕನ್ನಡ ಸಿನಿಮಾಗಳು ಧೂಳೆಬ್ಬಿಸ್ತಾ ಇವೆ. ಆ ಸಿನಿಮಾಗಳ ಸಾಲಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಕನ್ನಡದ ವಿಭಿನ್ನ, ವಿನೂತನ ಚಿತ್ರ ಡೊಳ್ಳು.
ಇತ್ತೀಚೆಗೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಲಿಸ್ಟ್ ಅನೌನ್ಸ್ ಮಾಡೋವಾಗ ಕನ್ನಡಾಭಿಮಾನಿಗಳ ಎದೆಬಡಿತ ಜೋರಾಗಿತ್ತು. ಪಟ್ಟ ಶ್ರಮ, ಶ್ರದ್ಧೆಗೆ ಪ್ರತಿಫಲ ಸಿಗುತ್ತಾ ಅನ್ನೋ ಗೊಂದಲ ಮೂಡಿತ್ತು. ಈ ಎಲ್ಲಾ ಎಲ್ಲೆ, ಗಡಿಗಳನ್ನು ಮೀರಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿ ವಿಶ್ವಮಟ್ಟದಲ್ಲಿ ಕನ್ನಡ ಧ್ವಜ ರಾರಾಜಿಸುವಂತೆ ಮಾಡಿದ್ದು ಕನ್ನಡದ ನಾಲ್ಕು ಸಾಮಾಜಿಕ ಕಳಕಳಿಯ ಕಥೆಗಳು. ಈ ಸಾಲಿನಲ್ಲಿ ಸಾಗರ್ ಪುರಾಣಿಕ್, ಪವನ್ ಒಡೆಯರ್ರ ಡೊಳ್ಳು ಸಿನಿಮಾ ಕೂಡ ಒಂದು. ಇದೀಗ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ಚಿತ್ರತಂಡ ಚಿತ್ರಪ್ರೇಮಿಗಳಿಗೆ ಗುಡ್ನ್ಯೂಸ್ ಕೊಟ್ಟಿದೆ.
- ಗೋವಾ, ಚೆನ್ನೈ, ಅಮೇರಿಕಾದಲ್ಲೂ ಕನ್ನಡದ ಸೊಗಡು
- ‘ಡೊಳ್ಳು’ ಚಿತ್ರದಿಂದ ಕರುನಾಡ ಸಂಸ್ಕೃತಿಯ ಸೊಬಗು
ನ್ಯಾಷನಲ್ ಲೆವೆಲ್ನಲ್ಲಿ 20ಕ್ಕೂ ಅಧಿಕ ಪ್ರಶಸ್ತಿಗಳನ್ನು ಗೆದ್ದು ಹೆಮ್ಮೆಯಿಂದ ಬೀಗ್ತಾ ಇರೋ ಕನ್ನಡ ಸಂಸ್ಕೃತಿಯ ಸಿನಿಮಾ ಡೊಳ್ಳು. ಆಧುನಿಕತೆಯ ಗಿಮಿಕ್ ಇಲ್ಲದೇ ಹಳೆ ಕಾಲದ ಫಿಲ್ಮ್ ಟೆಕ್ನಿಕ್ ಬಳಸಿ ಕನ್ನಡದ ದೇಸಿ ಕಲೆಯ ಪರಿಚಯ ಮಾಡಿಕೊಡಲಾಗುತ್ತಿದೆ. ಆಗಸ್ಟ್ 26ಕ್ಕೆ ಕರ್ನಾಟಕ ಮಣ್ಣಿನ ಕಂಪು ಪ್ರಪಂಚದಾದ್ಯಂತ ಹರಡಲಿದೆ. 68ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ವಿಭಾಗದಲ್ಲಿ ಬೆಸ್ಟ್ ಆಡಿಯೋಗ್ರಫಿ, ಬೆಸ್ಟ್ ಫಿಯೇಚರ್ ಫಿಲ್ಮ್ ಸಾಲಿನಲ್ಲಿ ಎರಡು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಡೊಳ್ಳು ಸಿನಿಮಾ ಗೋವಾ, ಚೆನ್ನೈ, ನೇಪಾಳ,ಅಮೇರಿಕಾದಲ್ಲೂ ತನ್ನ ಛಾಪು ಮೂಡಿಸಿದೆ.
ಡೊಳ್ಳು ಒಂದು ಜಾನಪದ ಕಲೆಯಾಗಿದ್ದು, ಗ್ರಾಮೀಣ ಬಾರತದ ತಾಯಿ ಬೇರಾಗಿದೆ. ಇಂದಿಗೂ ಹಳ್ಳಿಯವರಿಗೆ ಡೊಳ್ಳು ಅಂದ್ರೇ ಜೀವಾಳ. ಈ ಸಿನಿಮಾದಲ್ಲೂ ಡೊಳ್ಳಿನ ಮಹತ್ವವನ್ನು ಹೇಳಲಾಗ್ತಿದೆ. ಕೈಲಾಸದಲ್ಲಿ ಕುಳಿತಿರುವ ಶಿವಪ್ಪನನ್ನು ಒಲಿಸಿಕೊಳ್ಳುವ ಭಕ್ತಿ ಮಾರ್ಗ ಡೊಳ್ಳು ಅಂತಾ ನಂಬಿರುವ ಹಳ್ಳಿ ಮಂದಿ ಸುತ್ತಾ, ಜನಪದ ಕಲೆ ಡೊಳ್ಳಿನ ಸುತ್ತಾ ಅದ್ಭುತ ಕಥೆ ಹೆಣೆಯಲಾಗಿದೆಯಂತೆ.
ಚಿತ್ರದಲ್ಲಿ ಕಾರ್ತಿಕ್ ಮಹೇಶ್, ನಿಧಿ ಹೆಗಡೆ, ಬಾಬು ಹಿರಣ್ಣಯ್ಯ ಸೇರಿ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಗೂಗ್ಲಿ, ರಣವಿಕ್ರಮ, ನಟ ಸಾರ್ವಭೌಮದಂತಹ ಹಿಟ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಜನಪ್ರಿಯ ನಿರ್ದೇಶಕ ಪವನ್ ಒಡೆಯರ್ ಹಾಗೂ ಅವ್ರ ಪತ್ನಿ ಅಪೇಕ್ಷಾ ಪುರೋಹಿತ್ ಡೊಳ್ಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕಮರ್ಷಿಯಲ್ ಸಿನಿಮಾ ಬಿಟ್ಟು ಕಂಟೆಂಟ್ ಹಾಗೂ ಕಲಾತ್ಮಕ ಚಿತ್ರಕ್ಕೆ ಕೈ ಹಾಕಿರೋದು ಶ್ಲಾಘನೀಯ. ಸುನೀಲ್ ಪುರಾಣಿಕ್ ಅವ್ರ ಮಗ ಸಾಗರ್ ಪುರಾಣಿಕ್ ಚೊಚ್ಚಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಅಭಿಲಾಶ್ ಕಲಾಥಿ ಕ್ಯಾಮೆರಾ ಕಣ್ಣಲ್ಲಿ ಹಳ್ಳಿಯ ಸುಂದರ ಪರಿಸರ ಸೊಗಸಾಗಿ ಸೆರೆಯಾಗಿದೆ. ಅಂತೂ ಆಗಸ್ಟ್ 26ಕ್ಕೆ ಡೊಳ್ಳು ಸದ್ದು ಗದ್ದಲದ ಅಬ್ಬರ ಜೋರಾಗಿರಲಿದೆ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ