ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತವನ್ನು ಲಂಚ-ಮಂಚದ ಸರ್ಕಾರವೆಂದು ಕರೆದಿದ್ದೆ ಕಾಂಗ್ರೆಸ್ ಶಾಸಕ ಪ್ರೀಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸರ್ಕಾರ ತನ್ನ ಅಕ್ರಮಗಳನ್ನು ಮುಚ್ಚಿಕೊಳ್ಳಲು, ತನ್ನ ಭ್ರಷ್ಟ ರೂಪವನ್ನು ರಕ್ಷಿಸಿಕೊಳ್ಳಲು, ತನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ನನ್ನ ಹೇಳಿಕೆಯನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿರುಚಿ ಕೆಪಿಟಿಸಿಎಲ್ ಅಕ್ರಮವನ್ನು ಈ ಮೂಲಕ ಮುಚ್ಚಿ ಹಾಕಲು ಬಿಜೆಪಿ ಹೊರಟು ನಿಂತಿದೆ ಎಂದು ಆರೋಪಿಸಿದ್ದಾರೆ.
ಕೆಲಸಕ್ಕಾಗಿ ಬಂದ ಯುವತಿಯನ್ನು ಈ ಸರ್ಕಾರದ ಮಂತ್ರಿ ಮೋಸ ಮಾಡಿ, ಸಿಕ್ಕಿ ಬಿದ್ದು ರಾಜೀನಾಮೆ ನೀಡಬೇಕಾಯಿತು. ಆದರೆ ಅವರ ಬಳಿ ಕ್ಷಮೆಯನ್ನು ಬಿಜೆಪಿಯ ಯಾರೊಬ್ಬರೂ ಕೇಳಲಿಲ್ಲ. ಕೇಂದ್ರ ಮಂತ್ರಿಯೊಬ್ಬರು ಅಶ್ಲೀಲವಾಗಿ ಪರಸ್ತ್ರೀಯೊಬ್ಬರೊಂದಿಗೆ ನಡೆಸಿದ್ದ ವಿಡಿಯೋ ವೈರಲ್ ಆದಾಗ ಹೆಣ್ಣನ್ನು ತೃಣವಾಗಿ ಕಂಡಿದ್ದ ಅವರ ಬಳಿ ಬಿಜೆಪಿಯ ಯಾರೊಬ್ಬರೂ ಕ್ಷಮೆಗೆ ಆಗ್ರಹಿಸಲಿಲ್ಲ. ಸದನದಲ್ಲಿ ಕೂತು ಪೋರ್ನ್ ವೀಕ್ಷಿಸಿ ಇಡೀ ರಾಜ್ಯದ ಹೆಣ್ಣು ಕುಲಕ್ಕೆ ಅಪಮಾನ ಮಾಡಿದವರ ಬಳಿ ಕ್ಷಮೆಗೆ ಆಗ್ರಹಿಸಲಿಲ್ಲ. ಬದಲಾಗಿ ಮತ್ತೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದರು. ಈಗ ಸರಿಯಾದ ಹೇಳಿಕೆ ನೀಡಿದ್ದರಿಂದ ನನಗೆ ರಾಜೀನಾಮೆ ಕೊಡಿ ಎನ್ನುತ್ತಿದ್ದಾರೆ ಎಂದರು.