ಮಂಡ್ಯ : ಜಿಲ್ಲಾದ್ಯಂತ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ಬಸರಾಳು ಹೋಬಳಿಯ ದೊಡ್ಡಗರುಡನಹಳ್ಳಿ ಶಿಂಷಾ ನಾಲೆ ಒಡೆದಿದ್ದು, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಮಂಡ್ಯ ತಾಲೂಕಿನ ಹಳ್ಳಿ ಗ್ರಾಮದಲ್ಲಿ ಯಶೋದಮ್ಮ ಎಂಬುವವರಿಗೆ ಸೇರಿದ 45 ಕುರಿಗಳು ಸಾವನ್ನಪ್ಪಿದೆ.
ಕುರಿಗಳನ್ನು ಕೂಡಿ ಹಾಕಿದ್ದ ಕೊಠಡಿಯ ಗೋಡೆ ಕುಸಿದು ಅವಘಡ ಸಂಭವಿಸಿದೆ. ಯಶೋದಮ್ಮ ಕುಟುಂಬದವರು ಪರಿಹಾರಕ್ಕಾಗಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಬೆಂಗಳೂರು ಮೈಸೂರು ರಾಷ್ಟ್ರೀಯ ದಾರಿಯ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ರಾತ್ರಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ರಸ್ತೆಗೆ ಹರಿದು ಬಂದಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಮಂಡ್ಯ ನಗರದ ಸಮೀಪವಿರುವ ಸಾತನೂರು ಕೆರೆ ತುಂಬಿದ್ದು, ಪಕ್ಕದ ಗ್ರಾಮಗಳಿಗೆ ನೀರು ನುಗ್ಗಿದೆ. ಇದರಿಂದ ಇಡೀ ಗ್ರಾಮವೇ ನಡುಗಡ್ಡೆಯಾಗಿ ಮಾರ್ಪಟ್ಟಿದೆ. ಹಲವಾರು ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.