ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಳೆಯಾದ್ರೆ ಸಾಕು ರಸ್ತೆ ಯಾವುದು. ಗುಂಡಿ ಯಾವುದು. ಹಳ್ಳ ಯಾವುದು ಅಂತ ಗೊತ್ತಾಗಲ್ಲ. ಕಾರಣ ಬಿಬಿಎಂಪಿ ಬೇಜವಾಬ್ದಾರಿ. ಎಷ್ಟೇ ಜನ ಗುಂಡಿಗಳಿಂದ ಸತ್ತರು ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಸದ್ಯ ನಗರದಲ್ಲಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ನೀಡಿರೋ ಅಂಕಿ ಅಂಶಗಳ ಪ್ರಕಾರ ಬರೋಬ್ಬರಿ ,3000 ಸಾವಿರ ಗುಂಡಿಗಳು ಇವೆಯಂತೆ. ಹೀಗಾಗಿ ವಾಹನ ಸವಾರರಂತೂ ಅಂಗೈಯಲ್ಲಿ ಜೀವ ಹಿಡಿದುಕೊಂಡೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದೆಲ್ಲಡೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಪಾಲಿಕೆ ವ್ಯಾಪ್ತಿಯ ಯಾವದೇ ರಸ್ತೆಗೆ ಕಾಲಿಟ್ಟರೂ ಗುಂಡಿ ಬಿದ್ದು ಅಧ್ವಾನವಾಗಿರುವ ರಸ್ತೆಗಳೇ ಸ್ವಾಗತ ಕೋರುತ್ತವೆ. ನಗರದಲ್ಲಿ ಅವೈಜ್ಞಾನಿಕವಾಗಿ ಗುಂಡಿಗಳನ್ನ ಮುಚ್ಚುತ್ತಿರುವುದರಿಂದ ಡಾಂಬರು ಕಿತ್ತು ಬಂದು ಹೊಂಡಾ- ಗುಂಡಿಗಳು ನಿರ್ಮಾಣವಾಗಿದೆ. ನಗರದ ಮತ್ತಿಕೆರೆ, ಬಿಎಲ್ ಸರ್ಕಲ್, ಗಾಂಧಿನಗರ, ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವೆಡೆ ರಸ್ತೆಗಳೆಲ್ಲವೂ ಅಸ್ಥಿಪಂಜರಗಳಂತಾಗಿವೆ. ಆದ್ರೆ ಬಿಬಿಎಂಪಿ ಕಮಿಷನರ್ ಮಾತ್ರ ನಗರದಲ್ಲಿ 3000 ಗುಂಡಿಗಳಿಗೆ ಮುಚ್ಚುತ್ತೇವೆ ಅಂತ ಹೇಳ್ತಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿ ಮಳೆಗಾಲದಲ್ಲಿ, ಒಂದೆರಡು ಮಳೆ ಬಿದ್ದರೂ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಳ್ಳುವುದು ಮಾಮೂಲಿ. ಮಳೆಗಾಲದಲ್ಲೂ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ತಂತ್ರಜ್ಞಾನ ಲಭ್ಯವಿದೆ. ಆದರೆ, ಅದನ್ನು ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗುತ್ತಿಲ್ಲ
ಒಟ್ಟಿನಲ್ಲಿ ನಗರದೆಲ್ಲೆಡೆ ಗುಂಡಿಗಳನ್ನ ಯಾವಾಗ ಮುಚ್ಚೀರಾ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಆದ್ರೆ ಪಾಲಿಕೆಗೆ ಮಾತ್ರ ಕಿವಿ ಕೇಳ್ತಿಲ್ಲ. ಹೀಗಾಗಿ ವಾಹನ ಸವಾರರು ಎಚ್ಚರಿಕೆಯಿಂದ ಓಡಾಟ ನಡೆಸೋದು ಉತ್ತಮ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು