Friday, November 22, 2024

ರಾಷ್ಟ್ರಪತಿ ಚುನಾವಣೆ: ಮೊದಲ ಸುತ್ತಿನಲ್ಲಿ ದ್ರೌಪದಿ ಮುರ್ಮು ಮುನ್ನಡೆ

ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಭಾರೀ ಮುನ್ನಡೆ ಸಾಧಿಸಿದ್ದಾರೆ.

ಸಂಸದರ ಮತಗಳ ಎಣಿಕೆಯ ಈ ಸುತ್ತಿನಲ್ಲಿ ದ್ರೌಪದಿ ಮುರ್ಮು ಅವರು 540 ಮತಗಳನ್ನು ಪಡೆದರೆ, ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು 208 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಪಿ.ಸಿ. ಮೋದಿ ತಿಳಿಸಿದ್ದಾರೆ.

15 ಮತಗಳು ಅಮಾನ್ಯ ಎಂದು ಪರಿಗಣಿಸಲಾಗಿದ್ದು, 8 ಮಂದಿ ಸಂಸದರು ಮತ ಹಾಕಿಲ್ಲ ಎಂದು ಅವರು ಹೇಳಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತೀ ಸಂಸದನ ಮತದ ಮೌಲ್ಯ 700 ಆಗಿದ್ದು, ಇದರನ್ವಯ ದ್ರೌಪದಿ ಮುರ್ಮು ಮತಗಳ ಮೌಲ್ಯ 5,23,600(ಶೇಕಡ 72.19) ಆಗಿದೆ. ಅಡ್ಡಮತದಾನದ ಲಾಭವೂ ಅವರಿಗೆ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುರ್ಮು ಅವರಿಗೆ ಅಧಿಕೃತವಾಗಿ ಬೆಂಬಲ ವ್ಯಕ್ತಪಡಿಸಿದ್ದ ಪಕ್ಷಗಳ ಸಂಸತ್ ಸದಸ್ಯರ ಸಂಖ್ಯೆಗಿಂತ ಅವರು ಐದಾರು ಮತಗಳನ್ನು ಹೆಚ್ಚಿಗೆ ಪಡೆದಿದ್ದಾರೆ. ಚುನಾವಣೆಗೂ ಮುನ್ನ 538 ಮಂದಿ ಸಂಸತ್ ಸದಸ್ಯರು ಅವರಿಗೆ ಬೆಂಬಲ ಸೂಚಿಸಿದ್ದರು. ಅದರಲ್ಲಿ ಕೆಲವರು ಮತದಾನ ಮಾಡಿಲ್ಲ. ಹಾಗಿದ್ದರೂ ಮುರ್ಮು ಅವರು 540 ಮತಗಳನ್ನು ಪಡೆದಿದ್ಧಾರೆ.

ಯಶವಂತ್ ಸಿನ್ಹಾ ಅವರು ಪಡೆದಿರುವ 208 ಮತಗಳ ಮೌಲ್ಯ 1,45,600 (27.81)ರಷ್ಟಿದೆ.

ಎರಡನೇ ಹಂತದ ಶಾಸಕರ ಮತಗಳ ಎಣಿಕೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

RELATED ARTICLES

Related Articles

TRENDING ARTICLES