Monday, November 25, 2024

ಮುಂದುವರಿದ ಮಳೆ ಅವಾಂತರಗಳು: ಜನಜೀವನ ಅಸ್ತವ್ಯಸ್ತ, ಅಪಾರ ಬೆಳೆ ನಾಶ

ರಾಜ್ಯದಲ್ಲಿ ಮಳೆ ರಗಳೆ ಮುಂದುವರಿದಿದೆ. ವಿವಿಧೆಡೆ ಜನ ಹೈರಾಣಾಗಿದ್ದಾರೆ. ಅಪಾರ ಬೆಳೆಗಳು ನಾಶವಾಗಿವೆ. ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆ ಕೈಸೇರದೆ ಮಳೆ ಪಾಲಾಗಿರುವುದು ರೈತರನ್ನು ಕಂಗೆಡಿಸಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಎಲ್ಲೆಲ್ಲಿ ಏನೇನಾಯ್ತು.?

ರಾಜ್ಯದಲ್ಲಿ ಮಳೆ ಅವಾಂತರಗಳು ಮುಂದುವರಿದಿವೆ. ಜನಜೀವನ ಅಸ್ತವ್ಯಸ್ತವಾಗಿದೆ.ಅಪಾರ ಬೆಳೆ ಹಾನಿಯಾಗಿದೆ.ಹಾಸನ ಜಿಲ್ಲೆಯಲ್ಲಿ ಬರೋಬ್ಬರಿ‌ 421 ಮನೆಗಳಿಗೆ ಹಾನಿಯಾಗಿದೆ. 224 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎಲ್ಲರಿಗೂ ಎನ್ ಡಿ ಆರ್ ಎಫ್ ನಡಿಯಲ್ಲಿ‌ ಜಿಲ್ಲಾಡಳಿತ ಪರಿಹಾರ ನೀಡುತ್ತಿದೆ. ಇತ್ತ ನಿರಂತರ ಮಳೆಯಿಂದ ಕಾಫಿ ಹಾಗೂ ಮೆಣಸು ನೆಲಕಚ್ಚುತ್ತಿದ್ದು, ಸೂಕ್ತ ಪರಿಹಾರಕ್ಕೆ ಬೆಳೆಗಾರರು ಒತ್ತಾಯಿಸಿದ್ದಾರೆ… ಪಶ್ಚಿಮಘಟ್ಟ ಶ್ರೇಣಿಯಲ್ಲಿ ಮಳೆ ಮುಂದುವರೆದಿದ್ದು, ನಿರಂತರ ಮಳೆಯಿಂದ ಶಿರಾಡಿಘಾಟ್ ನಲ್ಲಿ ಭೂಕುಸಿತವಾಗಿರೋ ಸ್ಥಳದಲ್ಲಿ ದುರಸ್ಥಿ ಮಾಡೋದಕ್ಕೂ ಸಾಧ್ಯವಾಗ್ತಿಲ್ಲ.

ನಿರಂತರ ಮಳೆಯಿಂದಾಗಿ 13 ಎಕರೆಯಲ್ಲಿ ಬೆಳೆದ ಹೆಸರು ಬೆಳೆ ಸಂಪೂರ್ಣ ಹಾನಿಯಾಗಿದ್ದು, ಕಂಗಾಲಾದ ಬಾಗಲಕೋಟೆಯ ರೈತ ದೇವದಾಸ ಮಂಕಣಿ ಕಣ್ಣೀರು ಹಾಕಿದ್ದಾರೆ. ಈತ 2 ಲಕ್ಷ ಸಾಲ ಮಾಡಿದ್ದ ಎನ್ನಲಾಗಿದೆ.

ಶಿವಮೊಗ್ಗದ ಬೀಸನಗದ್ದೆ ಗ್ರಾಮ ನಡುಗಡ್ಡೆಯಾಗಿದ್ದು, ಅಪ್ರಾಪ್ತರೇ ದೋಣಿ ಚಾಲನೆ ಮಾಡುತ್ತಿರುವುದು ಆತಂಕ ಹೆಚ್ಚಿಸಿದೆ.

ಇನ್ನು ಈ ಸುದ್ದಿಯನ್ನು ಪವರ್ ಟಿ.ವಿ. ಬಿತ್ತರ ಮಾಡಿದ್ದೇ ತಡ ಕೂಡಲೇ ಎಚ್ಚೆತ್ತ ಶಿವಮೊಗ್ಗ ಜಿಲ್ಲಾಡಳಿತ, ದೋಣಿಗೆ ಲೈಫ್ ಜಾಕೆಟ್ ಮತ್ತು ಅನುಭವಿ ಚಾಲಕರನ್ನು ನೇಮಿಸಿತು. ಖುದ್ದು ಜಿಲ್ಲಾಧಿಕಾರಿಯೇ ಈ ಬಗ್ಗೆ ನಿಗಾ ವಹಿಸಿದ್ದು, ಖಾಸಗಿ ದೋಣಿಗಳಲ್ಲಿ ಸಂಚರಿಸುವವರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದು, ಸರ್ಕಾರದ ವತಿಯಿಂದ ದೋಣೀಯನ್ನು ನಿಯೋಜನೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಚಿಕ್ಕಮಗಳೂರಿನ ಮಾಲಂದೂರು ಗ್ರಾಮದಲ್ಲಿ ಎಲ್ಲರೂ ಮನೆಯಲ್ಲಿದ್ದಾಗಲೇ ಮನೆ ಕುಸಿದು ಬಿದ್ದಿದೆ.ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತುಮಕೂರಿನ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕ ಅಮ್ಜಾದ್ ಕೊನೆಗೂ ಶವವಾಗಿ ಪತ್ತೆಯಾಗಿದ್ದಾನೆ.

ದೇವರ ದರ್ಶನಕ್ಕೆಂದು ಬಂದು ದಾವಣಗೆರೆಯ ಹರಿಹರ ಸಮೀಪದ ಉಕ್ಕಡಗಾತ್ರಿಯಲ್ಲಿ ತುಂಗಾಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಸುಳಿವೇ ಸಿಗಲಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ.

ಮಂಗಳೂರಿನ ಪ್ರಸಿದ್ಧ ಪಣಂಬೂರು ಬೀಚ್​​ನಲ್ಲಿ ಕಡಲ ಅಲೆಗಳ ಅಬ್ಬರ ಜೋರಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಚಿಕ್ಕಮಗಳೂರಿನ ತ್ಯಾಗದಭಾಗಿ ತಾಂಡ್ಯ-ಸಿದ್ದಾಪುರ ಸಂಪರ್ಕ ಕಡಿತಗೊಂಡಿದೆ.ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಗುರ್ಜಾಪುರ ಬ್ರಿಡ್ಜ್ ಕಮ್ ಬ್ಯಾರೇಜ್ ಗೇಟ್ ಸ್ಟ್ರಕ್ ಆಗಿರುವ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಭೇಟಿ ನೀಡಿದರು.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನಾದ್ಯಂತ 81 ಮನೆಗಳಿಗೆ ಹಾನಿಯಾಗಿದ್ದು, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸರ್ವೆ ಕಾರ್ಯಕ್ಕೆ ಆದೇಶಿಸಿದ್ದಾರೆ.

ಬಳ್ಳಾರಿಯ ಕಂಪ್ಲಿ ಬಳಿಯ ತುಂಗಭದ್ರ ಸೇತುವೆ ಬಳಿ ನೀರಿಗೆ ಇಳಿದು ಫೋಟೊ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಹುಚ್ಚಾಟವಾಡುತ್ತಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಸರ್ಕಾರ ತ್ವರಿತವಾಗಿ ಸಂತ್ರಸ್ತರಿಗೆ ನೆರವಾಗಬೇಕಿದೆ.

ಬ್ಯೂರೋ ರಿಪೋರ್ಟ್‌ ಪವರ್ ಟಿವಿ

RELATED ARTICLES

Related Articles

TRENDING ARTICLES