ಶಿವಮೊಗ್ಗ : ಹಾಲ್ನೊರೆಯಂತೆ ಉಕ್ಕಿ ಹರಿಯುತ್ತಿರುವ ಬಿ.ಆರ್.ಪಿ. ಡ್ಯಾಂ ಭರ್ತಿಯಾಗುವ ಹಂತದಲ್ಲಿದ್ದು, ಈ ಡ್ಯಾಂನಿಂದ ಗುರುವಾರ ಇನ್ನೂ 45 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟಿದ್ದು, ಶುಕ್ರವಾರ ಸುಮಾರು 33 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಈ ಜಲಾಶಯದಿಂದ ಧುಮ್ಮಿಕ್ಕಿ ಹರಿಯುವ ನೀರು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಅದರಲ್ಲೂ, ರಾತ್ರಿ ವೇಳೆ ಈ ಡ್ಯಾಂನಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವುದು ನೋಡುವುದೇ, ರೋಮಾಂಚನ.
ಇನ್ನು ಭದ್ರಾ ಜಲಾಶಯದಿಂದ ಯಥೇಚ್ಛ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಭದ್ರಾ ನದಿ, ತುಂಬಿ ಹರಿಯುತ್ತಿದ್ದು, ಭದ್ರಾವತಿ ಪಟ್ಟಣದ ಸೇತುವೆ ಮುಳುಗಿ ಹೋಗಿದೆ. ಇಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಭದ್ರಾವತಿಯ ಸಂಗಮೇಶ್ವರ ಮಂಟಪ ಕೂಡ ಮುಳುಗಿ ಹೋಗಿದ್ದು, ಸೇತುವೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿದೆ. ಹುತ್ತಾ ಕಾಲೋನಿ, ಕವಲುಗುಂದಿ, ಎಕಿನ್ಸನ್ ಕಾಲೋನಿಯಲ್ಲಿ ನೆರೆ ಭೀತಿ ಸೃಷ್ಟಿಯಾಗಿದ್ದು, ಜಿಲ್ಲಾಡಳಿತ, ಮತ್ತು ಸ್ಥಳೀಯ ನಗರಸಭೆ, ಇಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಿದೆ.
ನೆರೆ ವೀಕ್ಷಣೆಗೆ ಬಂದ ಶಾಸಕ ಸಂಗಮೇಶ್‌ರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಈ ವೇಳೆ, ಶಾಸಕ ಸಂಗಮೇಶ್ ಹಾಗೂ ಸ್ಥಳೀಯರ ನಡುವೆ ಕೆಲ ಕಾಲ ವಾಗ್ವಾದ ಕೂಡ ಉಂಟಾಯ್ತು. ಆದರೆ, ಇದಕ್ಕೆ ಅಸಹಾಯಕತೆ ವ್ಯಕ್ತಪಡಿಸಿದ ಶಾಸಕ ಸಂಗಮೇಶ್, ಇಲ್ಲಿನ ಬಡಾವಣೆಗಳಿಗೆ ನೀರು ನುಗ್ಗದಂತೆ ಮಾಡಲು 135 ಕೋಟಿ ರೂ. ಯೋಜನೆ ಸಿದ್ಧಪಡಿಸಿ ನೀಡಲಾಗಿದ್ದರೂ, ಇದುವರೆಗೂ ಸರ್ಕಾರಗಳು ಗಮನ ಹರಿಸಿಲ್ಲ. ಕೇವಲ 8 ಕೋಟಿ ರೂ. ಅಷ್ಟೇ ನೀಡಿದೆ ಅಂತಾ ಅಸಹಾಯಕತೆ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಭದ್ರಾವತಿ ಸುತ್ತಮುತ್ತ ಹೆಚ್ಚು ಮಳೆಯಾಗದೇ ಇದ್ದರೂ, ಮಲೆನಾಡು ಪ್ರದೇಶದಲ್ಲಿ ಮಳೆಯಾದಾಗಲೆಲ್ಲಾ ತಪ್ಪದ ರಗಳೆಯಾಗಿದೆ.