ಶಿವಣ್ಣ ಪಬ್ಲಿಕ್ನಲ್ಲಿ ಕಾಣಿಸಿಕೊಂಡ್ರೆ ಸಾಕು ಅಭಿಮಾನಿ ದೇವರುಗಳು ಜಾತ್ರೆನೇ ಮಾಡಿ ಬಿಡ್ತಾರೆ. ಉತ್ಸವ ಮೂರ್ತಿಯಂತೆ ಮೆರೆಸಿಬಿಡ್ತಾರೆ. ಕಾರಣ ಅವ್ರೊಬ್ಬ ಸರಳತೆಯ ಸಾಕಾರಮೂರ್ತಿ. ಸನ್ ಆಫ್ ಬಂಗಾರದ ಮನುಷ್ಯ. ಎಲ್ಲಕ್ಕಿಂತ ಮಿಗಿಲಾಗಿ ಸ್ಯಾಂಡಲ್ವುಡ್ ಲೀಡರ್. ಸದ್ಯ ಬೈರಾಗಿ ವಿಜಯೋತ್ಸವದಲ್ಲಿ ಹರಿದ ಅಭಿಮಾನಿಗಳ ಅಭಿಮಾನದ ಹೊಳೆಯನ್ನ ಕಣ್ತುಂಬಿಕೊಳ್ಳಿ
‘ಬೈರಾಗಿ’ ವಿಜಯಯಾತ್ರೆಯಲ್ಲಿ ಸರಳತೆಯ ಸಾಮ್ರಾಟ
ಟಿ. ನರಸೀಪುರ, ಕೊಳ್ಳೇಗಾಲದಲ್ಲಿ ಅಭಿಮಾನದ ಸಾಗರ..!
ವರ್ಷದ ಮುನ್ನೂರ ಅರವತ್ತೈದು ದಿನಗಳೂ ಸಹ ಬ್ಯುಸಿ ಇರೋ ವ್ಯಕ್ತಿ ಅಂದ್ರೆ ಅದು ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್. ಹೌದು.. ಇಳಿ ವಯಸ್ಸಿನಲ್ಲೂ ಯೂತ್ ಐಕಾನ್ ಆಗಿ ಮಿಂಚು ಹರಿಸ್ತಿರೋ ಎನರ್ಜಿಟಿಕ್ ಸ್ಟಾರ್ ಇವ್ರು. ಶೂಟಿಂಗ್, ಡಬ್ಬಿಂಗ್, ಪ್ರೊಮೋಷನ್ಸ್ ಸಾಲದು ಅಂತ ಈಗ ಫಿಲ್ಮ್ ಪ್ರೊಡಕ್ಷನ್. ಹೀಗೆ ನಾನಾ ಕೆಲಸಗಳಲ್ಲಿ ತೊಡಗಿಸಿಕೊಂಡಿರೋ ಶಿವಣ್ಣ, ವೇದ ಶೂಟಿಂಗ್ ನಡುವೆಯೇ ಬೈರಾಗಿ ವಿಜಯಯಾತ್ರೆ ಆರಂಭಿಸಿದ್ದಾರೆ.
ಕಳೆದ ವಾರ ತೆರೆಕಂಡ ಬೈರಾಗಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ನಿರ್ಮಾಪಕ ಕೃಷ್ಣ ಸಾರ್ಥಕ್ರ ಈ ಬಾರಿಯ ಬರ್ತ್ ಡೇ ಗೆ ಇದಕ್ಕಿಂತ ಬೆಸ್ಟ್ ಗಿಫ್ಟ್ ಎನ್ನೇನು ಬೇಕು ಅಲ್ಲವೇ..? ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ಶಿವಣ್ಣಗೆ ಡಾಲಿ ಹಾಗೂ ದಿಯಾ ಫೇಮ್ ಪೃಥ್ವಿ ಅಂಬರ್ ಕೂಡ ಸಾಥ್ ನೀಡಿದ್ದಾರೆ. ಸಮಾಜಕ್ಕೆ ಕನೆಕ್ಟ್ ಆಗೋ ಅಂತಹ ಸಂದೇಶ ಸಾರುವ ಸಿನಿಮಾ ಇದಾಗಿದ್ದು, ಇಲ್ಲಿ ದುಡ್ಡು, ಅಧಿಕಾರದ ಹೊರತಾಗಿ ಸಮಾಜ ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಸಾಗಬೇಕು ಅನ್ನೋದನ್ನ ತೋರಲಾಗಿದೆ.
ರಿಲೀಸ್ಗೂ ಮುನ್ನ ಒಂದಷ್ಟು ಪ್ರಚಾರ ಮಾಡಿದ್ದ ತಂಡ, ಇದೀಗ ಶಿವಣ್ಣ ಮೂಲಕ ವಿಜಯಯಾತ್ರೆ ಆರಂಭಿಸಿದೆ. ಟಿ ನರಸೀಪುರ, ಕೊಳ್ಳೇಗಾಲದಲ್ಲಿ ಜನ ಕಿಕ್ಕಿರಿದು ತುಂಬೋ ಮೂಲಕ ಶಿವಪ್ಪನಿಗೆ ಸ್ವಾಗತ ಕೋರಿದ್ದು ವಿಶೇಷ. ಶಿವಣ್ಣ ಕೂಡ ಅಭಿಮಾನಿ ದೇವರುಗಳೊಂದಿಗೆ ಬೆರೆತು, ಅವ್ರ ಅಭಿಮಾನವನ್ನು ಸ್ವೀಕರಿಸಿದ್ರು.
ಇನ್ನು ಚಾಮರಾಜನಗರದಲ್ಲಿ ಅಭಿಮಾನಿ ಮಂಜುನಾಥ್ ಅವ್ರ ಕ್ಯಾಂಟೀನ್ಗೆ ಭೇಟಿ ನೀಡಿದ ಶಿವಣ್ಣಗೆ ಆರತಿ ಎತ್ತಿ ಬರಮಾಡಿಕೊಳ್ಳಲಾಯ್ತು. ಶಿವಣ್ಣ ಮೂರನೇ ಕಣ್ಣಿಗೆ ಕಾಣದಂತೆ ಆರತಿ ಹಿಡಿದವ್ರಿಗೆ ಐದು ನೂರು ರೂಪಾಯಿ ನೋಟು ನೀಡಿ, ನಂತ್ರ ಟೀ ಸವಿದು ಸರಳತೆಯ ಸಾರ್ವಭೌಮ ಅನಿಸಿಕೊಂಡ್ರು. ಅದೇನೇ ಇರಲಿ, ಬೈರಾಗಿಯನ್ನ ಆದಷ್ಟು ಬೇಗ ಕಣ್ತುಂಬಿಕೊಳ್ಳಿ, ಒಳ್ಳೆಯ ಸಿನಿಮಾಗಳಿಗೆ ಹೇಳಿ ಬಹುಪರಾಕ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ