ಬೆಂಗಳೂರು: ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಬೆಳಗ್ಗೆ 11ಗಂಟೆಗೆ ‘ಬೇಡ ಜಂಗಮ ಸತ್ಯ ಪ್ರತಿಪಾದನಾ ಸತ್ಯಾಗ್ರಹ ಹೋರಾಟ’- ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಆದರೆ ಸಮಾವೇಶಕ್ಕೆ ತೆರಳುತ್ತಿದ್ದ ವಿವಿಧ ಜಿಲ್ಲೆಗಳ ಸಮುದಾಯದ ಮುಖಂಡರು, ಕಾರ್ಯಕರ್ತನ್ನು ಪೊಲೀಸರ ರಸ್ತೆಯಲ್ಲೆ ತಡೆದು ನಿಲ್ಲಿಸಿದ್ದಾರೆ. ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ 30ಕ್ಕೂ ಹೆಚ್ಚು ಬಸ್‘ಗಳನ್ನು ಹಾಗೂ 50ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಪೊಲೀಸರು ತಡೆದಿದ್ದಾರೆ. ತುಮಕೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕೆಲ ಕಾಲ ಸಂಚಾರಕ್ಕೆ ತೊಂದರೆ ಆಯಿತು. ಪೊಲೀಸರೊಂದಿಗೆ ಮಾತಿನ ಚಕಮಕಿಯೂ ನಡೆದಿದೆ.
ಬೇಡ ಜಂಗಮ ಸಮಾವೇಶಕ್ಕೆ ಅನುಮತಿ ನೀಡಿಲ್ಲವಾದ್ದರಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ರಾಜಧಾನಿಗೆ ಆಗಮಿಸುತ್ತಿದ್ದ ಸಮುದಾಯ ಸಾವಿರಾರು ಜನರನ್ನು ಶಿರಾ ತಾಲೂಕಿನ ಕರಜೀವನಹಳ್ಳಿ ಬಳಿ ತಡೆಯಲಾಗಿದೆ. ತುಮಕೂರು ಎಸ್ ಪಿ ರಾಹುಲ್ ಕುಮಾರ್ ನೇತೃತ್ವದಲ್ಲಿ ಸ್ಥಳದಲ್ಲಿ ಮೊಕ್ಕಾಂ ಹೂಡಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಪ್ರತಿಭಟನಾಕಾರರ ಆಕ್ರೋಶ : ಸಮಾವೇಶಕ್ಕೆ ಅನುಮತಿ ನೀಡಿದ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಬೇಡ ಜಂಗಮರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಕಿಲೋ ಮೀಟರ್ ಗಟ್ಟಲೇ ಸಂಚಾರ ದಟ್ಟಣೆ ಉಂಟಾಗಿದೆ. ಉತ್ತರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ ಇನ್ನಿತರ ಕಡೆಯಿಂದ ಬರುವ ವಾಹನ ಸವಾರರು ಪದಾಡಿದ್ದಾರೆ. ಕರಜೀವನಹಳ್ಳಿ ಭಾಗದಲ್ಲೂ ಸಂಚಾರ ಸಮಸ್ಯೆ ಉಂಟಾಗಿದೆ.