ಹಾಸನ : ರಾಜ್ಯಕ್ಕೆ ಹಿತಕರವಾದ, ರೈತಪರವಾದ ಸರ್ಕಾರವನ್ನು ಕೊಡಬೇಕು ಎಂಬ ಹಿತದೃಷ್ಟಿಯಿಂದ ಆ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಎಂಟರಿಂದ ಹತ್ತು ಲಕ್ಷ ಜನ ಸೇರಿದ್ರು. ಜೆಡಿಎಸ್‌ಗೆ ಅನುಕೂಲವಾದಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಹಿಜಾಬ್, ಧರ್ಮ, ದೇವರು ಹೆಸರು ಇಟ್ಟುಕೊಂಡು ಇವತ್ತು ರಾಜಕೀಯ ಮಾಡುತ್ತಿದ್ದಾರೆ. ವಿವಾದಾತ್ಮಕ ವಿಷಯಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಅದರಿಂದ ಏನು ಫಲಿಸಲ್ಲ ಎಂದರು.
ಅದಲ್ಲದೆ, ಅಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಯಾರು ಒತ್ತುಕೊಟ್ಟು ಕೆಲಸ ಮಾಡುತ್ತಾರೆ. ಹಿಂದಿನ ಸರ್ಕಾರಗಳಲ್ಲಿ ನೀಡಿದ ಒಳ್ಳೆಯ ಕಾರ್ಯಕ್ರಮಗಳನ್ನು ನೆನೆಸಿಕೊಂಡು ಜನತೆ ನಮ್ಮ ಪಕ್ಷಕ್ಕೆ, ಕುಮಾರಣ್ಣ ಅವರಿಗೂ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಅವರ ಹೇಳಿಕೆ ಉತ್ಪ್ರೇಕ್ಷೆ ಅಂತ ಹೇಳಲ್ಲ. ಸಮಾಜದ ಕಳಕಳಿಯಿಂದ, ದೇವೇಗೌಡರು ಇರುವಾಗಲೇ ರಾಜ್ಯಕ್ಕೆ ಒಳ್ಳೆಯದಾಗಬೇಕು. ರಾಜ್ಯಕ್ಕೆ ಹಿತಕರವಾದ, ರೈತಪರವಾದ ಸರ್ಕಾರವನ್ನು ಕೊಡಬೇಕು ಎಂಬ ಹಿತದೃಷ್ಟಿಯಿಂದ ಆ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ವ್ಯಾಟ್ಸಪ್ ಗ್ರೂಪ್‌ಗಳಿಂದ ಲೆಫ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಅರಸೀಕೆರೆ ತಾಲ್ಲೂಕಿನ ಎಲ್ಲಾ ಮುಖಂಡರು ನಮ್ಮ ಸಂಪರ್ಕದಲ್ಲೇ ಇದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಾನು ಅರಸೀಕೆರೆ ತಾಲ್ಲೂಕಿನ ನಡೆಯುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇವೆ. ನಮ್ಮ ಮುಖಂಡರ ಮೇಲೆ ನಮಗೆ ವಿಶ್ವಾಸವಿದೆ. ಶಾಸಕ ಕೆ.ಎಂ.ಶಿವಲಿಂಗೇಗೌಡರು ಕೂಡ ನಮ್ಮ ಪಕ್ಷದ ಬಗ್ಗೆ ವಿಶ್ವಾಸ, ನಿಷ್ಠೆ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಮುಂದುವರಿಯುತ್ತಾರೆ ಎಂಬ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಕಾದು ನೋಡೋಣ ಎಂದು ಹೇಳಿದರು.
ಇನ್ನು ಇದೇವೇಳೆ ಅಗ್ನಿಪಥ್ ಯೋಜನೆ ಜಾರಿ ಹಾಗೂ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಅದರ ಬಗ್ಗೆ ಕಮೆಂಟ್ ಮಾಡಲು ಇಷ್ಟಪಡಲ್ಲ. ಆ ವಿಷಯವಾಗಿ ಮಾತನಾಡಬಾರದು ಎಂದು ಪಕ್ಷದಿಂದ ಅಧಿಕೃತ ಆದೇಶ ಬಂದಿದೆ. ಸಮಾಜದಲ್ಲಿ ಗೊಂದಲ ಸೃಷ್ಟಿಯಾಗುತ್ತೆ ಆದ್ದರಿಂದ ಮಾತನಾಡಬೇಡಿ ಎಂದಿದ್ದಾರೆ. ಹಾಗಾಗಿ ನಾನು ಆ ವಿಷಯದ ಬಗ್ಗೆ ಮಾತನಾಡಲ್ಲ. ಅದು ಸೆಂಟ್ರಲ್ ವಿಚಾರ ಹಾಗೂ ಪ್ರಜ್ವಲ್ ರೇವಣ್ಣ ಸಂಸದರಾಗಿ ಆ ವಿಷಯದ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ವಿಷಯ ಕೇಳಿ ನಾನು ಮಾತನಾಡುತ್ತೇನೆ ಎಂದು ಹೇಳಿದರು.