ಬೆಳಗಾವಿ : ಬಡ ರೈತನಿಗೆ ಆಸರೆಯಾಗಬೇಕಿದ್ದ ಗ್ರಾಮ ಪಂಚಾಯ್ತಿ ಸದಸ್ಯರೇ ದಲಿತ ಕುಟುಂಬಕ್ಕೆ ಮುಳುವಾಗಿದ್ದಾರೆ. ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲು ದಲಿತ ರೈತನೋರ್ವನ ಸಹಿ ಫೋರ್ಜರಿ ಮಾಡಿ 5 ಗುಂಟೆ ಜಮೀನನ್ನು ಕಬಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನ್ಯಾಯಕ್ಕಾಗಿ ಅಂಗಲಾಚಿದ ರೈತ ಕಚೇರಿಯಿಂದ ಕಚೇರಿಗೆ ಅಲೆದು ಹೈರಾಣಾಗಿದ್ದಾನೆ.
ರೈತನ ಹೆಸರು ಸಿದ್ದರಾಮಪ್ಪ ಹೊಸಮನಿ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾಮದ ದಲಿತ ರೈತ. ಪಿತ್ರಾರ್ಜಿತವಾಗಿ ಗ್ರಾಮದ ಪಕ್ಕದಲ್ಲೇ ಬಳುವಳಿಯಾಗಿ ಬಂದ ಒಂದು ಎಕರೆ ಐದು ಗುಂಟೆ ಜಾಗದಲ್ಲಿ ಸಾಲಸೂಲ ಮಾಡಿ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ರು. ಆದ್ರೆ, ಗ್ರಾಮ ಪಂಚಾಯಿತಿಗೆ ನೂತನ ಕಟ್ಟಡ ಕಟ್ಟಲು ಐದು ಗುಂಟೆ ಜಾಗ ಕಬಳಿಸಿದ್ದಾರೆ ಅಂತಾ ಆರೋಪಿಸುತ್ತಿದ್ದಾರೆ. ಕಟ್ಟಡ ಕಾಮಗಾರಿ ಆರಂಭವಾದ ದಿನದಿಂದಲೂ ಹೀಗೆ ಸಿದ್ದರಾಮಪ್ಪ ಹೋರಾಟ ಮಾಡುತ್ತಲೇ ಬಂದಿದ್ದಾರಂತೆ. ಆದ್ರೆ ಇವರ ತಂದೆಯ ಸಹಿ ನಕಲು ಮಾಡಿ ಗ್ರಾ.ಪಂ ಸದಸ್ಯರು, ಪಿಡಿಓ, ಸಿಇಓ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ನಿಮ್ಮ ತಂದೆ ಈ ಜಾಗವನ್ನು ಪಂಚಾಯಿತಿಗೆ ದಾನವಾಗಿ ನೀಡಿದ್ದಾರೆ ಎಂದು ಹೇಳುತ್ತಲೇ ಕಟ್ಟಡ ನಿರ್ಮಾಣ ಮಾಡಿದ್ದಾರಂತೆ. ನಮ್ಮ ತಂದೆ ದಾನವಾಗಿ ನೀಡಿದ್ರೆ ದಾನ ಪತ್ರವನ್ನಾದ್ರು ನೀಡಿ ಎಂದು ಸಿದ್ದರಾಮಪ್ಪ ಕೇಳಿದಾಗ ಸಿದ್ದರಾಮಪ್ಪನಿಗೆ ತಮ್ಮ ತಂದೆಯ ಸಹಿಯನ್ನು ಪೋರ್ಜರಿ ಮಾಡಿದ್ದು ಕಂಡು ಬಂದಿದೆ.
ತಂದೆ ಸಹಿ ನಕಲು ಮಾಡಿದ್ದಾರೆ ಎಂದು ತಿಳಿದ ಅಸಹಾಯಕ ಸಿದ್ದರಾಮಪ್ಪ ದಲಿತ ಸಂಘಟನೆಯ ಮೊರೆ ಹೋಗಿದ್ದಾರೆ. ಈಗ ದಲಿತ ಸಂಘಟನೆಗಳು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ದಲಿತನ ಧರಣಿಯನ್ನು ಬೆಂಬಲಿಸಿದ್ದಾರೆ.
ಸಿದ್ದರಾಮಪ್ಪ ತಂದೆ ದಾನವಾಗಿ ಗ್ರಾ. ಪಂಚಾಯತಿಗೆ ನೀಡಿದ್ರೆ ದಾನ ಪತ್ರ ತೋರಿಸಿ ಜೊತೆಗೆ ಐದು ಗುಂಟೆ ಜಾಗವನ್ನು ಏಕೆ ನಿಮ್ಮ ಹೆಸರಿಗೆ ಮಾಡಿಕೊಂಡಿಲ್ಲಾ ಎಂದು ಪ್ರಶ್ನೆ ಮಾಡಿದ್ದಾರೆ. ಖಂಡಿತ ಇದರಲ್ಲಿ ಪೋರ್ಜರಿ ನಡೆದಿದೆ ಎನ್ನುವುದು ಗೋತ್ತಾಗುತ್ತಿದೆ. ರೈತನಿಗೆ ಸೂಕ್ತ ಪರಿಹಾರ ನೀಡಿ ಇಲ್ಲಾ ಗ್ರಾ.ಪಂ ಕಟ್ಟಡ ತೆರವುಗೊಳಿಸಿ ಎಂದು ಆಗ್ರಹಿಸುತ್ತಿದ್ದಾರೆ ದಲಿತ ನಾಯಕರು.
ನಾವು ನೀವು ಗ್ರಾಮ ಪಂಚಾಯಿತಿ ಜಾಗವನ್ನು ಒತ್ತುವರಿ ಮಾಡಿರುವುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಆದ್ರೆ, ಗ್ರಾಮ ಪಂಚಾಯಿತಿಯ ಬಡವನ ಜಮೀನನ್ನು ಕಬಳಿಸಿದ್ದು ವಿಪರ್ಯಾಸವೇ ಸರಿ.ಸಂಬಂಧಿತ ಅಧಿಕಾರಿಗಳು ನೊಂದ ರೈತನಿಗೆ ನ್ಯಾಯ ಕೊಡಿಸಬೇಕಿದೆ.