ಬೆಳಗಾವಿ: ಕುಂದಾನಗರಿಯ MES ನಾಯಕರು ಪದೇ ಪದೇ ಭಾಷೆ, ಗಡಿವಿವಾದ ಸೇರಿದಂತೆ ಒಂದಲ್ಲಾ ಒಂದು ವಿಷಯವನ್ನು ಇಟ್ಟುಕೊಂಡು ಖಾತೆ ತೆಗೆದು ಛೀಮಾರಿ ಹಾಕಿಸಿಕೊಂಡರೂ ಬುದ್ದಿ ಕಲಿಯುವ ಲಕ್ಷಣಗಳೇ ಕಾಣ್ತಿಲ್ಲ.ಈಗ ಪರಿಷತ್ ಚುನಾವಣೆ, ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹೊಸ ಡ್ರಾಮಾ ಶುರು ಮಾಡಿದ್ದಾರೆ. ಇವ್ರಿಗೆ ಮರಾಠಿ ಭಾಷೆಯಲ್ಲೇ ಸರ್ಕಾರಿ ದಾಖಲಾತಿ ನೀಡ್ಬೇಕಂತೆ. ದಾಖಲೆ ನೀಡದಿದ್ದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಮಾಡ್ತಾರಂತೆ. ಈ ಮೂಲಕ ಮುಗ್ಧ ಮರಾಠಿ ಭಾಷಿಕರನ್ನ ಕರ್ನಾಟಕದ ವಿರುದ್ಧ ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನ ನಡೆಸಿದ್ದಾರೆ ಎಂಇಎಸ್ ನಾಯಕರು.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಕಣ್ಣು ಕೆಂಪಾಗಿವೆ. ಪದೇ ಪದೇ ಗಡಿಯಲ್ಲಿ ಭಾಷಾ ವಿಷ ಬೀಜ ಬಿತ್ತಿ ಗಡಿಯಲ್ಲಿ ಶಾಂತಿ ಕದಡುವ ಯತ್ನ ನಡೆಸುತ್ತಿರುವ MES ನಾಯಕರನ್ನು ಗಡಿ ಪಾರು ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಬೆಳಗಾವಿ ಸ್ಥಳೀಯ ನಾಯಕರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ದಿಟ್ಟ ಉತ್ತರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕೂಡಲೇ ಸರ್ಕಾರ ಕ್ರಮ ತೆಗೆದುಕೊಳ್ಳದೇ ಹೋದರೆ ಕನ್ನಡಪರ ಸಂಘಟನೆಗಳ ಒಂದಾಗಿ ಗಡಿ ಪಾರು ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಕನ್ನಡ ನೆಲದ ಅನ್ನ ತಿಂದು ನಮ್ಮ ನೆಲ ಜಲ ಭಾಷೆ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಮೃಧು ಧೋರಣೆ ತೋರುತ್ತಿರೋದ್ರಿಂದ MES ಪುಂಡರ ಮೊಂಡತನ ಮುಂದುವರೆದಿದೆ.