ಬೆಂಗಳೂರು: ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಅಡುಗೆ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದ್ದು, 14.2 ಕೆ.ಜಿ ಗ್ಯಾಸ್ ಸಿಲಿಂಡರ್ ಬೆಲೆ 999.50ಕ್ಕೆ ಏರಿಕೆಯಾಗಿದೆ. ಹೊಸ ದರ ಈಗಾಗಲೇ ಜಾರಿಯಾಗಿದ್ದು, ಈ ಮೂಲಕ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ದರ ಏರಿಕೆಯಾದಂತಾಗಿದೆ.ಇನ್ನು ಈ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 102.50 ರೂ.ಹೆಚ್ಚಿಸಲಾಗಿತ್ತು.ಈ ಬೆನ್ನಲ್ಲೇ 14.2 ಕೆಜಿ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಇನ್ನು 999.50ರೂ.ಆಗಿದೆ.
ಮಾರ್ಚ್ 22 ರಂದು ಕೊನೆಯ ಬಾರಿಗೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿತ್ತು. ಆಗ ಬೆಲೆಯನ್ನು 50 ರೂ.ಹೆಚ್ಚಿಸಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ಈ ಸಿಲಿಂಡರ್ನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿರಲಿಲ್ಲ. ಪ್ರಸ್ತುತ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ 2,355.50ರೂ.ಇದೆ. ಇದನ್ನು 2,253 ರಿಂದ ಹೆಚ್ಚಳ ಮಾಡಲಾಗಿತ್ತು. ಈ ನಡುವೆ 5 ಕೆಜಿ ಎಲ್ಪಿಜಿ ಸಿಲಿಂಡರ್ನ ಬೆಲೆ 655ರೂ. ಆಗಿದೆ.
ವ್ಯಾಟ್ನಂತಹ ಸ್ಥಳೀಯ ತೆರಿಗೆಗಳನ್ನು ಆಧರಿಸಿ ದರಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ. ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದ ಜನರು ಈಗಾಗಲೇ ಹೆಣಗಾಡುತ್ತಿರುವ ಸಮಯದಲ್ಲಿ ಗ್ಯಾಸ್ನ ಬೆಲೆಯೂ ಏರಿಕೆಯಾಗಿರೋದು ಜನರಿಗೆ ತಲೆನೋವು ಹೆಚ್ಚಿಸಿದೆ.