ಹುಬ್ಬಳ್ಳಿಯ ಕಿಮ್ಸ್ ಒಂದಲ್ಲ ಒಂದು ಅವಾಂತರಗಳ ಮೂಲಕ ಸುದ್ದಿ ಆಗುತ್ತಲೇ ಇರುತ್ತದೆ. ಆದ್ರೆ ಈಗ ಆಡಳಿತಾಧಿಕಾರಿ ಖುರ್ಚಿಗಾಗಿ ನಡೆದಿದ್ದ ಫೈಟಿಂಗ್ ವಿಷಯದಲ್ಲಿ ರಾಜ್ಯ ಸರ್ಕಾರ ಇದೀಗ ಮತ್ತೊಂದು ಟ್ವಿಸ್ಟ್ ನೀಡಿದ್ದು, ಸಾಕಷ್ಟು ಗೊಂದಲ ಉಂಟುಮಾಡಿದೆ. ಏನಿದು ಕಿತ್ತಾಟ..? ಗೊಂದಲ ಅಂತೀರಾ, ಇಲ್ಲಿದೆ ಫುಲ್ ಸ್ಟೋರಿ..
ಹೌದು, ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಅಂತಾ ಕರೆಸಿಕೊಳ್ಳೋ ಹುಬ್ಬಳ್ಳಿಯ ಕಿಮ್ಸ್ನ ಮುಖ್ಯ ಆಡಳಿತಾಧಿಕಾರಿ ಅಧಿಕಾರದ ವಿಚಾರದಲ್ಲಿ ಕಳೆದ 15 ದಿನಗಳಿಂದಲೂ ಸಾಕಷ್ಟು ತಿಕ್ಕಾಟ ನಡೆದಿದೆ. ಈ ಹಿಂದೆ ಇದ್ದಂತಹ ರಾಜಶ್ರೀ ಜೈನಾಪುರ ಅವರ ಜಾಗಕ್ಜೆ ಇಸ್ಮಾಯಿಲ್ ಶಿರಹಟ್ಟಿ ಅವರನ್ನ ಮಾರ್ಚ್ 5ರಂದು ರಾಜ್ಯ ಸರ್ಕಾರ ಹುಬ್ಬಳ್ಳಿಯ ಕಿಮ್ಸ್ನ ಮುಖ್ಯ ಆಡಳಿತಾಧಿಕಾರಿ ಜಾಗಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಿತ್ತು. ಆದ್ರೆ ರಾಜಕೀಯ ಒತ್ತಡದ ಹಿನ್ನೆಲೆ ರಾಜಶ್ರೀ ಜೈನಾಪುರ, ಇಸ್ಮಾಯಿಲ್ ಶಿರಹಟ್ಟಿಗೆ ಅಧಿಕಾರ ಹಸ್ತಾಂತರ ಮಾಡದೇ ಸತಾಯಿಸೋ ಮೂಲಕ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಅಧಿಕಾರ ಹಸ್ತಾಂತರ ಮಾಡದೇ ರಾಜಶ್ರೀ ಜೈನಾಪುರ ಹಲವು ದಿನ ರಜೆ ತಗೊಂಡಿದ್ರು. ಇದಾದ ಬಳಿಕ ಕಿಮ್ಸ್ ಆಡಳಿತ ಮಂಡಳಿಯೇ ಏಕಾಏಕಿ ಗುಮಾಸ್ತೆ ಸುಮಾ ಎಂಬುವವರನ್ನ ಸಿಎಓ ಹುದ್ದೆಗೆ ನೇಮಕ ಮಾಡುವ ಮೂಲಕ ಸಾಕಷ್ಟು ಗೊಂದಲ ಸೃಷ್ಟಿಸುವುದರ ಜೊತೆಗೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೂಲಕ ಸರ್ಕಾರದ ಆದೇಶವಿದ್ದರೂ ಸಿಎಓ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಕಣ್ಣಾಮುಚ್ಚಾಲೆ ಆಟದ ಅನುಮಾನ ಮೂಡಿದೆ.
ಇನ್ನು ಪ್ರಮುಖವಾಗಿ ಈ ಹಿಂದೆ ಬೇಕಂತಲೇ ಸರ್ಕಾರದ ವರ್ಗಾವಣೆ ಅದೇಶವನ್ನ ತಡೆಯುವ ಕೆಲಸವನ್ನ ಮಾಡಲಾಗುತ್ತಿದೆ ಅನ್ನೋ ಅನುಮಾನ ಸಹ ಹುಟ್ಟಿಕೊಂಡಿತ್ತು. ಅದೇ ರೀತಿ ಇದೀಗ ಸಿಎಒ ಅಧಿಕಾರ ಸ್ವೀಕಾರ ವಿಚಾರದಲ್ಲಿ ಮತ್ತೆ ಮರು ಆದೇಶ ಮಾಡುವ ಮೂಲಕ ವಿಜಯ ಕುಮಾರ ಹೊನಕೇರಿ ಎಂಬ ಅಧಿಕಾರಿಯನ್ನ ಕಿಮ್ಸ್ನ ಸಿಎಓ ಹುದ್ದೆಗೆ ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಮತ್ತೊಂದು ಆದೇಶ ಹೊರಡಿಸಿದೆ. ಇದರಿಂದಾಗಿ ಕೇವಲ 15 ದಿನಗಳಲ್ಲಿ ರಾಜ್ಯ ಸರ್ಕಾರ ಹಾಗೂ ಕಿಮ್ಸ್ ಆಡಳಿತ ಮಂಡಳಿ ಈ ರೀತಿ ಉನ್ನತ ಹುದ್ದೆಯ ವಿಚಾರದಲ್ಲಿ ಈ ದ್ವಂದ್ವ ನೀತಿ ಅನುಸರಿಸುತ್ತಿದ್ದು, ಸಾರ್ವಜನಿಕರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕುರ್ಚಿಗಾಗಿ ನಡೆಯುತ್ತಿರುವ ಹಗ್ಗಜಗ್ಗಾಟದಲ್ಲಿ ಅನುಮಾನ ಹುಟ್ಟುಕೊಂಡಿದ್ದು, ಇದೆಲ್ಲದರ ಹಿಂದೆ ಪ್ರಭಾವಿ ರಾಜಕೀಯ ನಾಯಕರ ಕೈವಾಡ ಇರುವುದು ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣ ಎನ್ನುವ ಮಾತುಗಳು ಕೇಳಿ ಬರ್ತಿವೆ.
ಸುರೇಶ ನಾಯ್ಕ ಪವರ್ ಟಿವಿ ಹುಬ್ಬಳ್ಳಿ