ಶಿವಮೊಗ್ಗ: ಕಾಲೇಜು ಆವರಣದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬರಬಾರದು, ಇದು ಇನ್ಮುಂದೆ ನಡೆಯುವುದಿಲ್ಲ ಎಂದು ಶಿವಮೊಗ್ಗದ ತೀರ್ಥಹಳ್ಳಿಯ ಗುಡ್ಡೆಕೊಪ್ಪದಲ್ಲಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಇಂದು ಗೃಹಮಂತ್ರಿ ಆರಗ ಜ್ಞಾನೇಂದ್ರ ಮಾದ್ಯಮದೊಂದಿಗೆ ಮಾತನಾಡಿದ ಅವರು ಕಾಲೇಜು ಆಡಳಿತ ಮಂಡಳಿ ನಿರ್ಧರಿಸುವ ಯೂನಿಫಾರಂ ಮಾತ್ರ ಧರಿಸಿ ಬರಬೇಕು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸೂಚನೆ ನೀಡಿದರು. ಮತ್ತು ಯೂನಿಫಾರಂ ಕಡ್ಡಾಯ ಮಾಡಿ ಎಂದು ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆಗೆ ಆದೇಶ ಹೊರಡಿಸಿದೆ. ಈ ಆದೇಶವನ್ನು ಎಲ್ಲರೂ ಪಾಲಿಸಬೇಕು. ಈ ಆದೇಶ ಬಿಟ್ಟು, ಏನೇನೋ ವೇಷ ಧರಿಸಿ ಬಂದರೆ ಆಗುವುದಿಲ್ಲ. ಹಾಗೂ ನಮ್ಮ ಧರ್ಮ ಅದು, ನಮ್ಮ ಧರ್ಮ ಇದು ಎಂದರೆ ಯಾರು ಕೇಳುವುದಕ್ಕೆ ಆಗುವುದಿಲ್ಲ. ಧರ್ಮವನ್ನು ಮೀರಿ ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಭಾವನೆ ಇರಬೇಕು. ಶಾಲಾ-ಕಾಲೇಜುಗಳಲ್ಲಿ ಸಂಸ್ಕಾರ ಸಿಗುತ್ತದೆ. ಯೂನಿಫಾರಂ ಎಂದರೆ, ಸಮಾನತೆಯ ಸಂಕೇತ.
ಯಾವಾಗಲೂ ಇಲ್ಲದ ಹಿಜಾಬ್ ಧರಿಸಿಯೇ ಬರುತ್ತೆವೆ ಎಂದು ಮಕ್ಕಳು ಹೇಳುತ್ತಿದ್ದಾರೆ. ಇದರ ಹಿಂದೆ,ರಾಜ್ಯದಲ್ಲಿ ಕಾಣದ ಶಕ್ತಿಯೊಂದು ಕೆಲಸ ಮಾಡುತ್ತಿದೆ. ಈ ಅನುಮಾನ ನಮಗೆ ಬಂದಿದೆ. ಪೊಲಿಸ್ ಇಲಾಖೆಗೆ ಈ ಬಗ್ಗೆ ಗಮನಹರಿಸಲು, ಸೂಚಿಸಲಾಗಿದೆ. ಇದರ ಹಿಂದೆ ಯಾರಿದ್ದಾರೆ..? ಅವರ ತಂತ್ರ ಏನು ಎಂಬುದು ನೋಡುವಂತೆ ನಿರ್ದೇಶನ ನೀಡಲಾಗಿದೆ. ಕಾಲೇಜು ಆಡಳಿತ ಮಂಡಳಿಗೆ, ಎಲ್ಲಾ ರೀತಿಯ ಪೊಲೀಸ್ ರಕ್ಷಣೆ ನೀಡಲು ಕ್ರಮ ವಹಿಸಲಾಗಿದೆ.
ವಿದ್ಯಾರ್ಥಿಗಳು ಯೂನಿಫಾರಂ ಧರಿಸಿಯೇ ಬರಬೇಕು. ಕಾಲೇಜಿ ಆಡಳಿತ ಮಂಡಳಿಯ ನಿರ್ಧಾರದಂತೆ, ಕಾಲೇಜಿಗೆ ಬರಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಾನು ಮನವಿ ಮಾಡಿಕೊಳ್ಳುತ್ತೆನೆ. ಕೆಲವೇ ತಿಂಗಳಲ್ಲಿ ಪರೀಕ್ಷೆ ಶುರುವಾಗುತ್ತೆ. ಕಳೆದೆರೆಡು ವರ್ಷ ಕೋವಿಡ್-19 ನಿಂದ ಹಾಳಾಗಿದೆ. ಈ ಬಾರಿ ಮಕ್ಕಳ ಭವಿಷ್ಯ ಹಾಳಾಗಾಬಾರದು, ಯಾರನ್ನು ಎತ್ತಿ ಕಟ್ಟುವ, ಪ್ರಚೋದನೆ ಮಾಡುವ ಕೆಲಸ ಯಾರೂ ಮಾಡಬಾರದು.
ಈ ಬಗ್ಗೆ ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತೆನೆಂದು ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದಾರೆ.