ರಾಜ್ಯ : ಕೊರೋನಾ ಅಟ್ಟಹಾಸ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಪಾಸಿಟಿವಿಟಿ ರೇಟ್ ಕಡಿಮೆ ಇದ್ದ ಜಿಲ್ಲೆಗಳಲ್ಲೂ ಈಗ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.ಇದು ಆಯಾ ಜಿಲ್ಲಾಡಳಿತಗಳಿಗೆ ಇನ್ನಷ್ಟು ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರಿನಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಬೇರೆ ಜಿಲ್ಲೆಗಳಲ್ಲೂ ಕೊವಿಡ್ ಮತ್ತೆ ಉಗ್ರಸ್ವರೂಪ ತಾಳಿದೆ.ದಿನೇ ದಿನೇ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು,ಸೋಮವಾರ ಒಂದೇ ದಿನ ಬರೋಬ್ಬರಿ 27,156 ಪ್ರಕರಣಗಳು ಪತ್ತೆಯಾಗಿವೆ.ಹಾಸನ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟವಾಗಿದೆ. ಸೋಮವಾರದ ವರದಿ ಪ್ರಕಾರ ಪಾಸಿಟಿವಿಟಿ ದರ 32.93ಕ್ಕೇರಿದ್ದು,ಹಾಸನ ರಾಜ್ಯದಲ್ಲೇ ಅಗ್ರಸ್ಥಾನಕ್ಕೇರಿದೆ.
ರಾಜ್ಯದಲ್ಲಿ ಕೊವಿಡ್ ಉಗ್ರತಾಂಡವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ.ಸಿಇಒಗಳೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಅಲ್ಲದೆ ಕೊವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದ್ರು.
ಕಳೆದ ಕೆಲವು ವಾರಗಳ ಹಿಂದೆ ರಾಜ್ಯದಲ್ಲಿ ಹೆಚ್ಚಿನ ತಾಲೂಕುಗಳಲ್ಲಿ ಒಟ್ಟು ಪಾಸಿಟಿವಿಟಿ ದರ ಶೇ.3ಕ್ಕಿಂತ ಕಡಿಮೆ ಇತ್ತು.ಆದ್ರೆ,ಈಗ ಅಲ್ಲೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗ್ತಿದೆ.ಇದೀಗ ವಿದ್ಯಾರ್ಥಿಗಳಿಗೂ ಸೋಂಕು ಆವರಿಸುತ್ತಿದ್ದು, ಮಂಡ್ಯಾದ ಪಿಇಎಸ್ ಕಾಲೇಜಿನಲ್ಲಿ ಮೂರು ದಿನಗಳಲ್ಲೇ 140 ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟಿದೆ.ಹಾಸನದ ಕಾಲೇಜ್ ಒಂದರಲ್ಲೂ ಇದೇ ಅವಸ್ಥೆಯಾಗಿದ್ದು, ಸದ್ಯ ಕಾಲೇಜ್ ಆಡಳಿತ ಮಂಡಳಿಗಳು ಕಾಲೇಜುಗಳನ್ನ ಮುಚ್ಚಿವೆ.
ಒಟ್ಟಾರೆ,ದೇಶದಲ್ಲಿ ನಿತ್ಯ ಕಂಡುಬರುವ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯದ್ದೇ ಬಹುದೊಡ್ಡ ಪಾಲಿದೆ ಎಂಬುವುದನ್ನು ನಾವು ನಂಬಲೇಬೇಕಾಗಿದೆ. ಅದರಲ್ಲೂ ಬೆಂಗಳೂರು ಈಗಾಗಲೇ ಕೊವಿಡ್ ತಾಣವಾಗಿ ಪರಿಣಮಿಸುತ್ತಿದೆ.ಕೊರೋನಾದ ಈ ಶರವೇಗಕ್ಕೆ ಅದ್ಯಾವಾಗ ಬ್ರೇಕ್ ಬೀಳಲಿದೆ ಅನ್ನೋದಕ್ಕೆ ಸದ್ಯಕ್ಕೆ ಉತ್ತರವೇ ಸಿಗದಾಗಿದೆ.