ದೇಶ : ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳೊಂದಿಗೆ ‘ಶಾಂತಿ’ಯನ್ನು ಕಾಪಾಡಿಕೊಳ್ಳಲು ಪಾಕಿಸ್ತಾನ ಮುಂದಾಗಿದ್ದು, ಈ ವಿಷಯದಲ್ಲಿ ಮುಕ್ತ ವಾತಾವರಣ ನಿರ್ಮಾಣ ಮಾಡಲು ಮೊದಲ ಬಾರಿಗೆ ರೂಪಿಸಿರುವ ರಾಷ್ಟ್ರೀಯ ಭದ್ರತಾ ನೀತಿಯಲ್ಲಿ ಒತ್ತು ನೀಡಲಾಗಿದೆ.
ಕಾಶ್ಮೀರ ವಿವಾದವು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾತುಕತೆಗೆ ದೊಡ್ಡ ಅಡ್ಡಿಯಾಗಿದ್ದರೂ, ನೆರೆಯ ರಾಷ್ಟ್ರಗಳೊಂದಿಗೆ ಶಾಂತಿಯುತ ಮತ್ತು ಆರ್ಥಿಕ ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಲು ಹೊಸ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ರಾಷ್ಟ್ರೀಯ ಭದ್ರತಾ ಸಮಿತಿ ಮತ್ತು ಸಚಿವ ಸಂಪುಟ ಸಭೆ ಕಳೆದ ತಿಂಗಳು ಹೊಸ ನೀತಿಗೆ ಒಪ್ಪಿಗೆ ನೀಡಿದ್ದು, ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ಔಪಚಾರಿಕವಾಗಿ ಈ ನೀತಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ನಾವು ಭಾರತದೊಂದಿಗೆ ಹಗೆತನ ಮುಂದುವರಿಸಲು ಬಯಸುವುದಿಲ್ಲ. ಹೊಸ ನೀತಿಯಲ್ಲಿ ನೆರೆಯ ರಾಷ್ಟ್ರಗಳೊಂದಿಗೆ ಶಾಂತಿ ಬಯಸುವುದನ್ನು ಪ್ರಸ್ತಾಪಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.