ಚಿಕ್ಕಬಳ್ಳಾಪುರ: ಕ್ಯಾಂಟರ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ, ಅಯ್ಯಪ್ಪ ಭಕ್ತರಿಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ. ಧರಣೀಶ್ , ನಿರಂಜನ್ ಸಿಂಗ್ ಮೃತರು. ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44 ಬಳಿ ಈ ಅಪಘಾತ ಸಂಭವಿಸಿದೆ. ಮೃತರಿಬ್ಬರನ್ನು ಆಂಧ್ರ ಮೂಲದ ಗುಂತಕಲ್ ನಿವಾಸಿಗಳೆಂದು ಗುರುತಿಸಲಾಗಿದೆ.
ಕೇರಳದ ಶಬರಿಮಲೆಯಿಂದ ಆಂಧ್ರಕ್ಕೆ ವಾಪಾಸ್ಸಾಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಕಾರು ಪಂಕ್ಚರ್ ಆಗಿತ್ತು. ಇದರಿಂದಾಗಿ ಕಾರು ಹೆದ್ದಾರಿ ಮಧ್ಯೆ ನಿಂತಿತ್ತು. ಈ ಕಾರಿನಲ್ಲಿ ಒಟ್ಟು 5 ಮಂದಿ ಪ್ರಯಾಣಿಸುತ್ತಿದ್ದರು. ಪಂಕ್ಚರ್ ಆದ ಕಾರಿನಿಂದ ನಾಲ್ವರು ಕೆಳಗೆ ಇಳಿದಿದ್ದರು. ನಿರಂಜನ್ ಸಿಂಗ್ ಮಾತ್ರ ಕಾರಲ್ಲೇ ನಿದ್ದೆ ಮಾಡುತ್ತಿದ್ದು, ಧರಣೀಶ್ ಸ್ಟೆಪ್ನಿ ಟೈರ್ ತೆಗೆದುಕೊಳ್ಳುವ ಸಲುವಾಗಿ ಡಿಕ್ಕಿ ತೆಗೆದು ಲಗೇಜ್ ಕೆಳಗೆ ಇಳಿಸಿಕೊಳ್ಳುತ್ತಿದ್ದ. ಈ ವೇಳೆ ಹೆದ್ದಾರಿಯಲ್ಲಿ ಅತಿ ವೇಗವಾಗಿ ಬಂದಿರುವ ಕ್ಯಾಂಟರ್ ನಿಂತಿದ್ದ ಕಾರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ನಿರಂಜನ್ ಸಿಂಗ್ ಹಾಗೂ ಧರಣೀಶ್ ಮೃತಪಟ್ಟಿದ್ದಾರೆ.