ಚಾಮರಾಜನಗರ : ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ ವಾರಾಂತ್ಯ ಕರ್ಪ್ಯೂ ಜಾರಿಯಾಗುವುದರಿಂದ ಪ್ರಸಿದ್ಧ ಯಾತ್ರಸ್ಥಳ ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
ಇಂದು ಸಂಜೆ 5 ರಿಂದ ಸೋಮವಾರ ಬೆಳಗ್ಗೆ 7 ರವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಇರಲಿದ್ದು ದೇಗುಲದಲ್ಲಿ ಅರ್ಚಕರು ನಡೆಸುವ ನಿತ್ಯದ ಪೂಜಾ ಕೈಂಕರ್ಯ ಬಿಟ್ಟರೇ ಊಳಿದೆಲ್ಲಾ ಸೇವೆಗಳು ರದ್ದಾಗಿದೆ. ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿದ್ದರೂ ವಸತಿ, ದೇಗುಲ ಪ್ರವೇಶ ಇರುವುದಿಲ್ಲ ಎಂದು ದೇವಸ್ಥಾನದ ಪ್ರಾಧಿಕಾರ ತಿಳಿಸಿದೆ.
ಇನ್ನು, ಯಳಂದೂರು ತಾಲೂಕಿನ ಪುರಾಣ ಪ್ರಸಿದ್ದ ಬಿಳಿಗಿರಿ ರಂಗನಾಥ ದೇವಾಲಯದಲ್ಲಿ ಪ್ರತಿ ಸಂಕ್ರಾತಿ ಬಳಿಕ ನಡೆಯುವ ಚಿಕ್ಕಜಾತ್ರೆಯನ್ನೂ ಸಹ ಜಿಲ್ಲಾಡಳಿತ ರದ್ದು ಪಡಿಸಿದೆ. ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯೂ ಕೊರೋನಾ ಕಾರಣದಿಂದಾಗಿ ರದ್ದಾಗಿದ್ದು ಸರಳ,ಸಾಂಪ್ರದಾಯಿಕ ಪೂಜೆ ಪುನಸ್ಕಾರ ನಡೆಯಲಿದೆ. ಒಟ್ಟಾರೆ ಜಿಲ್ಲೆಯ ಎಲ್ಲಾ ದೇವಾಲಯಗಳು ಸಹ ಭಕ್ತರ ಪ್ರವೇಶಕ್ಕೆ ಈ ಎರಡು ದಿನ ಬಂದ್ ಆಗಿದ್ದು, ಕೊವೀಡ್ ನಿಯಮವನ್ನು ಜಿಲ್ಲಾಡಳಿತ ಸಂಪೂರ್ಣ ಕಟ್ಟುನಿಟ್ಟಿನಿಂದ ಪಾಲಿಸುವ ಮೂಲಕ ಮೂರನೇ ಅಲೆಯಿಂದ ಜಿಲ್ಲೆಯನ್ನ ದೂರ ಇಡಲು ಸತಪ್ರಯತ್ನ ಮಾಡುತ್ತಿದೆ.