ಕಲಬುರ್ಗಿ: ಅಂದು ನೈಟ್ ಕರ್ಫ್ಯೂ ನಡುವೆಯೂ ಎಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿದ್ರು. ಕೆಲವರು ಮನೆಯಲ್ಲಿ ಸಂಭ್ರಮಾಚರಣೆ ಮಾಡ್ತಿದ್ರೆ, ಇನ್ನೂ ಕೆಲವರು ಕಂಠಪೂರ್ತಿ ಕುಡಿದು ರಸ್ತೆ ಮೇಲೆ ತೂರಾಡ್ತಿದ್ದರು. ಮೆಹಬೂಬ್ ನಗರದಲ್ಲಿ ಸಹ ಗೌಸ್ ಜಮಾದರ್ ಎಂಬಾತ ಕಂಠಪೂರ್ತಿ ಕುಡಿದು ರಸ್ತೆ ಮೇಲೆ ಓಡಾಡ್ತಿದ್ದ. ರಾತ್ರಿ ಯಿಡೀ ಕುಡಿದು, ಬೆಳಗಿನ ಜಾವ ಮನೆಗೆ ಹೋಗಲು ದಾರಿಹೋಕರಲ್ಲಿ ಲಿಫ್ಟ್ ಕೇಳಿದ್ದಾನೆ. ಆಗ ಜಗದೀಶ್ ಮತ್ತು ಅನಿಲ್‌ಕುಮಾರ್, ಗೌಸ್ ಜಮಾದರ್ಗೆ ಡ್ರಾಪ್ ಕೊಟ್ಟಿದ್ದಾರೆ. ಸ್ವಲ್ಪ ಮುಂದೆ ಹೋದ ನಂತರ ಗೌಸ್ ಜಮಾದರ್, ಮನೆ ದಾರಿ ಸರಿಯಾಗಿ ತೋರಿಸುವ ಬದಲು ಅಡ್ಡಾದಿಡ್ಡಿ ದಾರಿ ತೋರಿಸಿ ಅವ್ಯಾಚ್ಯ ಶಬ್ದಗಳಿಂದ ಬೈಯ್ದಿದ್ದಾನೆ. ಇಷ್ಟೇ ನೋಡಿ ಗೌಸ್ ಕಥೆ ಮುಗೀತು. ಕೋಪಗೊಂಡ ಜಗದೀಶ್ ಮತ್ತು ಅನಿಲ್, ಗೌಸ್ ಮೇಲೆ ಕಲ್ಲು ಎತ್ತಿ ಹಾಕಿ ಕೊಂದೇ ಬಿಟ್ರು.
ಇನ್ನು, ಗೌಸ್ ಜಮಾದರ್ ಹತ್ಯೆ ಪ್ರಕರಣ ಚೌಕ್ ಠಾಣೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಗೌಸ್‌ನನ್ನ ಮೆಹಬೂಬ್ ನಗರದಿಂದ ಯಾರು ಕರೆದುಕೊಂಡು ಹೋಗಿದ್ದರೆಂಬ ತನಿಖೆ ಶುರು ಮಾಡಿದ್ದ ಬೆನ್ನಲ್ಲೆ ಪೊಲೀಸರಿಗೆ ಹಿಂಟ್ ಕೊಟ್ಟಿದ್ದು ಸಿಸಿ ಕ್ಯಾಮರಾ. ಸಿಸಿ ಟಿವಿಯಲ್ಲಿ, ಗೌಸ್ ಜಮಾದರ್‌ನನ್ನ ಜಗದೀಶ್ ಮತ್ತು ಅನಿಲ್‌ಕುಮಾರ್ ತಮ್ಮ ಬೈಕ್ ಮೇಲೆ ಕೂರಿಸಿಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಆರೋಪಿಗಳನ್ನ ಬಂಧಿಸಲಾಗಿದೆ. ಒಟ್ನಲ್ಲಿ ಸಂಭ್ರಮಾಚರಣೆಯ ನೆಪದಲ್ಲಿ ಕ್ಷುಲ್ಲಕ ಕಾರಣಕ್ಕೆ ಓರ್ವ ಕೈಲಾಸಕ್ಕೆ ಹೋದ್ರೆ, ದುಡುಕಿನ ನಿರ್ಧಾರ ಕೈಗೊಂಡು ಇಬ್ಬರು ಶ್ರೀಕೃಷ್ಣನ ಜನ್ಮಸ್ಥಳಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.
ಅನಿಲ್‌ಸ್ವಾಮಿ, ಪವರ್ ಟಿವಿ ಕಲಬುರಗಿ