ಮೇಕೆದಾಟು ಯೋಜನೆಗಾಗಿ ಬೃಹತ್ ಪಾದಯಾತ್ರೆ ರೂಪಿಸಿದ್ದ ಕಾಂಗ್ರೆಸ್‌ನ್ನು ಹತ್ತಿಕ್ಕಲೆಂದೇ ರಾಜ್ಯ ಸರ್ಕಾರ ಕೊರೊನಾ ಹೆಸರಲ್ಲಿ ಕಠಿಣ ಕಾನೂನುಗಳ ಆದೇಶ ಮಾಡಿದೆ ಎಂದು ವಿಪಕ್ಷಗಳು ಕಿಡಿಕಾರುತ್ತಿದ್ದು, ಇದಕ್ಕೆ ಬಿಜೆಪಿ ಮಂತ್ರಿಗಳು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ಗೆ ರಾಜ್ಯದಲ್ಲಿ ಪ್ರತ್ಯೇಕ ನಿಯಮ ಮಾಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಸರ್ಕಾರದ ನಿರ್ದೇಶನ ಜಾರಿಯಾಗಿದೆ. ಎಲ್ಲರೂ ಪಾಲನೆ ಮಾಡಬೇಕು. ಇಂತಹ ಜೀವನ್ಮರಣ ಹೋರಾಟದ ನಡುವೆಯೂ ನಾನು ರಾಜಕಾರಣದ ದಾರಿ ಹುಡುಕುತ್ತಿದ್ದೇನೆ ಎಂದರೆ ಆ ಪಕ್ಷದ ಮನಸ್ಥಿತಿ ಏನಿದೆ ಎಂದು ಗೊತ್ತಾಗುತ್ತೆ. ಯಾವುದೇ ಪಾದಯಾತ್ರೆ, ಸಭೆ ಸಮಾರಂಭಗಳನ್ನ ನಡೆಸೋ ಹಾಗಿಲ್ಲ ಎಂದು ಹೇಳಲಾಗಿದೆ. ಅವರಿಗೆ ಅಂತ ಪ್ರತ್ಯೇಕವೇನಿಲ್ಲ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸಹ ನಿರ್ದೇಶನ ನೀಡಿದೆ. ಇದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಎಲ್ಲದನ್ನೂ ರಾಜಕೀಯ ಲೆಕ್ಕಾಚಾರದಲ್ಲಿ ನೋಡಿದರೆ ಸರಿ ಹೋಗದು. ತಜ್ಞರ ವರದಿ ಆಧಾರದ ಮೇಲೆ ಈ ನಿಯಮಾವಳಿಗಳನ್ನ ರೂಪಿಸಿರ್ತಾರೆ ಎಂದು ಆರಗ ಹೇಳಿದರು.