Tuesday, November 5, 2024

1600ಕಿ.ಮೀ. ಸೈಕಲ್ ಸವಾರಿ ಮಾಡಿದ ವಿಷ್ಣು

ಕಾರವಾರ : ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರೋ ರಾಷ್ಟ್ರ. ಇಲ್ಲಿ ಹಲವು ಮಹತ್ವದ ಸ್ಥಳಗಳಿವೆ, ವೈವಿಧ್ಯಮಯ ಭಾಷೆಗಳಿವೆ. ಆದ್ರೆ ಅದೆಷ್ಟೋ ಸ್ಥಳಗಳ ಮಹತ್ವ ಅನೇಕರಿಗೆ ಗೊತ್ತೇ ಇರುವುದಿಲ್ಲ. ಹೀಗಾಗಿ ಕಾರವಾರದ ಯುವಕನೋರ್ವ ಸೈಕಲ್ ಮೂಲಕ ಗುಜರಾತಿನ ಸ್ಟ್ಯಾಚು ಆಫ್​ ಯುನಿಟಿಗೆ ಹೋಗಿ ಜನತೆಗೆ ಅವುಗಳ ಮಹತ್ವವನ್ನು ಸಾರುತ್ತಿದ್ದಾರೆ.

ಹೌದು, ಉತ್ತರಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆ ಉದ್ಯೋಗಿಯಾಗಿರುವ ವಿಷ್ಣು ಅಭೂತಪೂರ್ವ ಸಾಧನೆ ಮಾಡಿದ್ದಾರೆ.ಮಹಾರಾಷ್ಟ್ರದ ಲಾಥೂರ್​ನಿಂದ ಗುಜರಾತಿನಲ್ಲಿರುವ ಸ್ಟ್ಯಾಚು ಆಪ್ ಯುನಿಟಿವರೆಗೆ ಸೈಕಲ್​ನಲ್ಲಿ ಹೋಗಿ ಬಂದಿದ್ದಾರೆ.

ಡಿಸೆಂಬರ್ 7ಕ್ಕೆ ಹೊರಟು ಐದು ದಿನಗಳಲ್ಲಿ 800 ಕಿಲೋಮೀಟರ್ ಕ್ರಮಿಸಿದ್ದು, 182 ಮೀಟರ್ ಎತ್ತರದ ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ದೇಶದ ಹೆಮ್ಮೆಯಾಗಿದೆ. ಡ್ಯೂಟಿಗೆ ರಜೆ ಹಾಕಿ ಈ ಪ್ರಯಾಣ ಕೈಗೊಂಡಿದ್ದೆ, ಸೈಕಲ್ ಯಾನದಲ್ಲಿ ಹಲವು ಕಡಿದಾದ ರಸ್ತೆ, ಘಟ್ಟ ಪ್ರದೇಶಗಳು ಹೀಗೆ ಎದುರಾದ ಎಲ್ಲಾ ಮಾರ್ಗಗಳನ್ನ ಯಶಸ್ವಿಯಾಗಿ ಕ್ರಮಿಸಿದ್ದು ಸಂತಸ ತಂದಿದೆ ಎಂದು ವಿಷ್ಣು ಅವರು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿಷ್ಣು ಅವರು ಕಳೆದ 15 ವರ್ಷಗಳಿಂದ ಭಾರತೀಯ ನೌಕಾಸೇನೆಯಲ್ಲಿ ಸಿವಿಲಿಯನ್ ಡಿಫೆನ್ಸ್ ಉದ್ಯೋಗಿಯಾಗಿ ಕಾರವಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು 1600 ಕಿಲೋಮೀಟರ್ ಸೈಕಲ್ ಯಾನದಲ್ಲಿ ವಿವಿಧ ಭಾಷಿಗರು, ವಿವಿಧ ಧರ್ಮೀಯರು, ವೈವಿಧ್ಯಮಯ ಆಹಾರಗಳ ಪರಿಚಯವಾಗಿದೆ. ದಾರಿಯುದ್ದಕ್ಕೂ ಏಕತೆಯ ಪ್ರತಿಮೆ ಬಗ್ಗೆ ಸಂದೇಶ ರವಾನಿಸಿರುವ ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೆಕರ್ ಹಾಗೂ ಕಾರವಾರ ಬೈಸಿಕಲ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಒಟ್ಟಿನಲ್ಲಿ ವಿವಿಧ ಭಾಷೆ, ಜನಾಂಗದವರಿರುವ ದೇಶದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಬೇಕಾಗಿದೆ. ಸರ್ವಧರ್ಮ ಸಮಭಾವದಿಂದ ಎಲ್ಲರೂ ಜೀವನ ನಡೆಸಬೇಕೆಂಬ ಉದ್ದೇಶವನ್ನು ದೇಶದ ಜನರಿಗೆ ಈ ಮೂಲಕ ಸಾರಿದ್ದಾರೆ.

RELATED ARTICLES

Related Articles

TRENDING ARTICLES