ನಾನು ಮತ್ತು ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಸೇಡಿನ ರಾಜಕಾರಣ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಮರಾಠಿ ದೈನಿಕ ‘ಲೋಕಸತ್ತಾ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪವಾರ್, ಮನಮೋಹನ್ ಸಿಂಗ್ ಆಡಳಿತದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಹಿಂದಿನ ಯುಪಿಎ ಸರ್ಕಾರದಲ್ಲಿ ನನ್ನನ್ನು ಹೊರತುಪಡಿಸಿದರೆ ಬೇರೆ ಯಾವುದೇ ಸಚಿವರು ಇರಲಿಲ್ಲ ಎಂದಿದ್ದಾರೆ.
ಮೋದಿಜಿ ಗುಜರಾತ್ ಸಿಎಂ ಆಗಿದ್ದಾಗ ನಾನು ಕೇಂದ್ರದಲ್ಲಿದ್ದೆ. ಪ್ರಧಾನಿ ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆದಾಗ, ಮೋದಿಜಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳ ಗುಂಪನ್ನು ಮುನ್ನಡೆಸುತ್ತಿದ್ದರು ಮತ್ತು ಕೇಂದ್ರದ ಮೇಲೆ ದಾಳಿ ನಡೆಸುತ್ತಿದ್ದರು. ಹಾಗಾಗಿ, ಅಂತಹ ಪರಿಸ್ಥಿತಿಯಲ್ಲಿ ಮೋದಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ತಂತ್ರ ರೂಪಿಸುತ್ತಿದ್ದೆವು ಎಂದಿದ್ದಾರೆ.