ಚಾಮರಾಜನಗರ : ನಾನು ದಂಧೆ ಮಾಡಿಲ್ಲ, ಲೂಟಿ ಹೊಡೆದಿಲ್ಲ, ಜೂಜಾಡಿಲ್ಲ, ಗ್ರಾನೈಟ್ ಬಿಸಿನೆಸ್ ಮಾಡಿಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡುವ ನನಗೆ ಒಂದು ಓಟ್ ಕೊಡಿ ಎಂದು ಚಾಮರಾಜನಗರದಲ್ಲಿ ವಿಧಾನಪರಿಷತ್ ಚುನಾವಣೆಯ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಮನವಿ ಮಾಡಿದರು.
ನಗರದ ಜಿಲ್ಲಾಸ್ಪತ್ರೆಯ ಮುಂದೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್, ಕೆಲಕಾಲ ಜಿಲ್ಲಾಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು. ಜಿಲ್ಲಾಸ್ಪತ್ರೆಯಿಂದ ಜಿಲ್ಲಾ ಕೇಂದ್ರದ ಹೊರವಲಯದಲ್ಲಿರುವ ನೂತನ ಆಸ್ಪತ್ರೆಗೆ ಎಲ್ಲಾ ಒಪಿಡಿ, ತುರ್ತು ಚಿಕಿತ್ಸಾ ಕೇಂದ್ರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸ್ಥಳಾಂತರ ಮಾಡಿರುವ ಕ್ರಮವನ್ನು ಖಂಡಿಸಿದ ಅವರು, ಹದಿನೈದು ದಿನಗಳ ಒಳಗೆ ಜಿಲ್ಲಾಸ್ಪತ್ರೆಗೆ ಓಪಿಡಿ ಹಾಗೂ ತುರ್ತು ಚಿಕಿತ್ಸಾ ಕೇಂದ್ರವನ್ನು ವರ್ಗಾಯಿಸುವಂತೆ ಆಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನನ್ನ ಹತ್ರ ಹಣ ಇಲ್ಲಾ ಆದರೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ ಒಂದು ಮತ ನನಗೆ ಕೊಡಿ, ಇನ್ನೊಂದ್ ಓಟು ನೀವು ಯಾರಿಗಾದರೂ ಹಾಕಿಕೊಳ್ಳಿ, ಪ್ರಜಾಪ್ರಭುತ್ವದ ತಾಯಿಬೇರಾದ ಗ್ರಾಪಂ ಸದಸ್ಯರು ಯಾವುದೇ ಒತ್ತಡ, ಆಮಿಷಕ್ಕೆ ಒಳಗಾಗದೇ ನನಗೊಂದು ಮತ ಹಾಕಬೇಕೆಂದು ಹೇಳಿದರು.
ನಾನು ಗೆದ್ದ ಕೂಡಲೇ ಮೊದಲ ಕೆಲಸ ಚಾಮರಾಜನಗರ ಆಮ್ಲಜನಕ ದುರಂತದಲ್ಲಿ ಮೃತಪಟ್ಟ 36 ಮಂದಿಗೆ ಶಾಂತಿ ಕೊಡಿಸುವ ಕೆಲಸ ಮಾಡುತ್ತೇನೆ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮೊದಲ ದಿನವೇ ಹೋರಾಡುತ್ತೇನೆ, ಗ್ರಾಪಂ ಸದಸ್ಯರಿಗೆ 5 ಸಾವಿರ, ಉಪಾಧ್ಯಕ್ಷರಿಗೆ 7.5 ಸಾವಿರ ಹಾಗೂ ಅಧ್ಯಕ್ಷರಿಗೆ 10 ಸಾವಿರ ರೂ. ಗೌರವಧನ ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟರು.
ಗೌರವಧನ ಉದ್ದಿನವಡೆಗೆ ಸಾಲಲ್ಲ ಒಂದು ಉದ್ದಿನವಡೆಗೆ 60 ರೂ. ಇದೆ. ವಡೆ ತಿನ್ನಬೇಕೆಂದರೆ ಇನ್ನೊಬ್ಬ ಮೆಂಬರ್ನ್ನು ಜೊತೆಗೆ ಕರೆದುಕೊಂಡು ಬೈಟ್ ಟೂ ತಿನ್ನಬೇಕು. ಯಾವನೋ ಮಂತ್ರಿ ಹೇಳ್ತಾನೆ ಬಿಜೆಪಿಗೆ ಮತ ಹಾಕಿದರೇ 10 ರೂ. ವೇತನ ಕೊಡುತ್ತೇವೆಂದು, ಅವನ ನಾಲಿಗೆಗೆ ಮಾನ-ಮರ್ಯಾದೆ ಇಲ್ಲ ಎಂದು ಹೆಸರು ಹೇಳದೇ ಸಚಿವ ಈಶ್ವರಪ್ಪ ವಿರುದ್ಧ ಕಿಡಿಕಾರಿದರು.
ಸದಸ್ಯರು ಪ್ರಾಮಾಣಿಕವಾಗಿ ನನಗೊಂದು ಮತ ನೀಡಬೇಕು ಎಂದರು. ಎಲ್ಲಾ ಪಕ್ಷವು ಓರ್ವ ಸಾಕು ಎಂದು ಒಬ್ಬೊಬ್ಬರನ್ನು ನಿಲ್ಲಿಸಿದೆ. ಎರಡನೇ ಅವನು ನಾನೇ ಆದ್ದರಿಂದ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ, ಮೈಸೂರು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರದ ಆಕ್ಷೇಪ ಸಂಬಂಧ ಕೆಲವೇ ಹೊತ್ತಲ್ಲಿ ತೀರ್ಪು ಬರಲಿದ್ದು ಅದೇನೆ ಬಂದರೂ ಚುನಾವಣಾಧಿಕಾರಿ ತೀರ್ಮಾನವೇ ಸುಪ್ರೀಂ. ಚುನಾವಣೆ ಬಳಿಕ ಬೇಕಾದರೇ ಅವರು ನ್ಯಾಯಾಲಯದಲ್ಲಿ ಅರ್ಜಿ ಹಾಕಬಹುದು ಎಂದರು