ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನ ನ.29 ರಿಂದ ಆರಂಭವಾಗಲಿದೆ. ಈ ಸಲದ ಅಧಿವೇಶನದಲ್ಲಿ ಆಡಳಿತರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಹಾಕಿಸಲು ಕಾರ್ಯತಂತ್ರವನ್ನು ಕಾಂಗ್ರೆಸ್ ರೂಪಿಸುತ್ತದೆ. ಇಂದು ಕಾಂಗ್ರೆಸ್ ಸಂಸದೀಯ ಸಮಿತಿ ಸಭೆ ನಡೆದಿದ್ದು, ದೇಶದಲ್ಲಿ ಇತ್ತೀಚೆಗೆ ನಡೆದ ವಿಚಾರಗಳನ್ನಿಟ್ಟುಕೊಂಡು ಸದನದಲ್ಲಿ ಧ್ವನಿ ಎತ್ತಲು ಸಿದ್ಧವಾಗಿದೆ. ಇಂದಿನ ಸಭೆಯಲ್ಲಿ ಕ್ರಿಪ್ಟೋ ಕರೆನ್ಸಿ, ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ನಡೆದ ರೈತರ ಹೋರಾಟದಲ್ಲಿ ಮಡಿದ ರೈತರ ಕುಟುಂಬಕ್ಕೆ ಪರಿಹಾರ ಮತ್ತು ಒಂದು ವರ್ಷಗಳಿಂದ ಹೋರಾಟ ನಿರತ ರೈತರಿಗೆ ನಷ್ಟವಾಗಿರುವ ಪರಿಹಾರವನ್ನು ಕೇಂದ್ರ ಸರ್ಕಾರ ಭರಿಸುವುದರ ಕುರಿತು ಚರ್ಚೆ ನಡೆದಿದೆ.
ಇದರ ಜೊತೆಗೆ ಸಂಸತ್ ಅಧಿವೇಶನದಲ್ಲಿ ‘ಕೋವಿಡ್ ನ್ಯಾಯ’ ಅಭಿಯಾನದ ಬಗ್ಗೆಯೂ ಚರ್ಚೆ ನಡೆಸಬೇಕೆಂದು ಕಾಂಗ್ರೆಸ್ ನಿರ್ಧರಿಸಿದೆ. ಗುಜರಾತ್ ಸರ್ಕಾರ ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಸೋಂಕಿತರು ಸಾವನ್ನಪ್ಪಿರುವ ಬಗ್ಗೆ ತಪ್ಪು ಅಂಕಿ ಅಂಶಗಳನ್ನು ನೀಡಿದ್ದು, ಜನರ ದಿಕ್ಕು ತಪ್ಪಿಸಿದೆ. ಮೂರು ಲಕ್ಷ ಜನ ಸಾವನ್ನಪ್ಪಿದ್ದರು ಸಹ ಕೇವಲ ಹತ್ತು ಸಾವಿರ ಜನ ಸಾವನ್ನಪ್ಪಿದ್ದಾರೆ ಅಂತಾ ಮಾಹಿತಿ ನೀಡಿದೆ. ಹೀಗಾಗಿ ಸಾವನ್ನಪ್ಪಿದ ಕುಟುಂಬಕ್ಕೆ ತಲಾ #4lakhdenehongey (4ಲ್ಯಾಕ್ ದೇನೇ ಹೋಂಗಿ) ಎಂಬ ಅಭಿಯಾನ ಆರಂಭಿಸಿರುವ ರಾಹುಲ್ ಗಾಂಧಿ, ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಕಾಂಗ್ರೆಸ್ ಸಿಎಲ್ಪಿ ನಾಯಕರುಗಳು ಕೋವಿಡ್ ಮೃತರ ಕುಟುಂಬಗಳಿಗೆ ಪರಿಹಾರಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯಬೇಕೆಂಬ ನಿಲುವು ತೆಗೆದುಕೊಂಡಿದ್ದಾರೆ.
ಸಂತೋಷ್ ಹೊಸಹಳ್ಳಿ, ನವದೆಹಲಿ.