ವಿಜಯಪುರ: ಅಂಧ ಜೋಡಿಗಳ ಮದುವೆಗೆ ಅಂಧರೇ ಸಹಾಯ ಮಾಡುತ್ತಿರುವ ಅಪರೂಪದ ಘಟನೆ ವಿಜಯಪುರದಲ್ಲಿ ನಡೆದಿದೆ. ಅಂಧರ ಬಾಳಿಗೆ ಅಂಧರೇ ದಾರಿ ದೀಪವಾಗುತ್ತಿದ್ದಾರೆ.
ಜೈ ಭವಾನಿ ಟ್ರಸ್ಟ್ ನಲ್ಲಿರುವ ಅಂಧರಾದ ನಟರಾಜ ಹಾಗೂ ಗಾಯತ್ರಿ ಎಂಬವವರಿಗೆ ಮದುವೆ ಮಾಡಲು ಇದೀಗ ಅಂಧ ಸ್ನೇಹಿತರೆ ಮುಂದಾಗಿದ್ದಾರೆ. ನಾಳೆಯ ಶುಭ ಮುಹೂರ್ತದಲ್ಲಿ ಇವರ ಮದುವೆಯನ್ನ ಅಂಧ ಸ್ನೇಹಿತರು ನಗರದ ಸೃಷ್ಟಿ ಕಾಲೋನಿಯಲ್ಲಿ ಮಾಡಲು ನಿಶ್ಚಯಿಸಿದ್ದು, ಮದುವೆಯ ಖರ್ಚು ವೆಚ್ಚಾಕ್ಕಾಗಿ ಅಂಧ ಸ್ನೇಹಿತರು ನಗರದ ವಿವಿದೆಡೆ ಹೋಗಿ ಜನರಿಂದ ಹಣದ ಸಹಾಯ ಪಡೆಯುತ್ತಿದ್ದಾರೆ. ಜನರು ಕೂಡ ಇವರ ಪ್ರಯತ್ನಕ್ಕೆ ಸಾಥ್ ನೀಡುತ್ತಿದ್ದಾರೆ. ಇನ್ನೂ ಅಂಧ ನಟರಾಜ ಹಾಗೂ ಅಂಧೆ ಗಾಯತ್ರಿ ಮದುವೆಯನ್ನ ಅದ್ಧೂರಿಯಾಗಿ ಮಾಡಲು ಗೆಳೆಯರು ಯೋಚಿಸಿದ್ದು, ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಎಲ್ಲರಂತೆ ತಮ್ಮ ಸ್ನೇಹಿತನ ಮದುವೆಯನ್ನ ವಿಜೃಂಭಣೆಯಿಂದ ಮಾಡಲು ಮುಂದಾಗಿದ್ದಾರೆ. ಇವರ ಈ ಕಾರ್ಯ ಇತರರಿಗೆ ಮಾದರಿಯೇ ಸರಿ.