ಮೈಸೂರು : ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಇದೆ.ಆದ್ರೆ ಮೈಸೂರಿನಲ್ಲಿ ಗಂಡ ಹೆಂಡಿರ ಜಗಳಕ್ಕೆ ಮಾವ ತತ್ತರಿಸಿದ್ದಾರೆ.ಜಿಲ್ಲೆಯ ರೂಪಾನಗರದಲ್ಲಿ ಡೈವೋರ್ಸ್ ಕೊಟ್ಟ ಪತ್ನಿ ಗಂಡನ ಆಸ್ತಿಗಾಗಿ ಮಾವನ ವಿರುದ್ದ ಸಿಡಿದೆದ್ದಿದ್ದಾಳೆ.ಮಕ್ಕಳ ಸಮೇತ ಮಧ್ಯರಾತ್ರಿ ಮನೆಗೆ ನುಗ್ಗಿ ದಾಂಧಲೆ ಮಾಡಿದ ಆರೋಪ ಸೊಸೆ ಮೇಲೆ ಬಂದಿದೆ.
ಸೊಸೆಯ ಕಿರುಕುಳಕ್ಕೆ ನಲುಗಿದ ಇಳಿ ವಯಸ್ಸಿನ ಮಾವ ಮನೆಯೊಳಗೆ ಸೇರಿ ಕೊಂಡಿದ್ದಾರೆ. ಹೊರಗೆ ಬರಲು ಹೆದರುತ್ತಿದ್ದಾರೆ.
ಕಂಡೆರಾಮಶೆಟ್ಟಿ(82) ಸೊಸೆ ಆರ್ಭಟಕ್ಕೆ ಹೆದರಿದ್ದಾರೆ ಮಾವ. ಬಳ್ಳಾರಿಯ ಅರುಂಧತಿ 9 ವರ್ಷದ ಹಿಂದೆ ಕಂಡೆರಾಮಶೆಟ್ಟಿ ಪುತ್ರ ಶ್ರೀನಿವಾಸ್ ರಾಜ್ರನ್ನ ವಿವಾಹವಾಗಿದ್ದರು.ಸಂಸಾರದಲ್ಲಿ ಬಿರುಕು ಕಂಡ ಹಿನ್ನಲೆ ಅರುಂಧತಿ ಮನೆ ಬಿಟ್ಟಿದ್ದಾರೆ. 9 ತಿಂಗಳಾದ್ರೂ ಗಂಡ ಕರೆದುಕೊಂಡು ಹೋಗಲು ಬಾರದಿದ್ದಾಗ ಈಕೆ ಡೈವೋರ್ಸ್ ಗಾಗಿ ನ್ಯಾಯಾಲಯದ ಮೊರೆಹೋಗಿದ್ದಾರೆ. ಜೀವನ ನಿರ್ವಹಣೆಗೆ ಪ್ರತಿ ತಿಂಗಳು 7500 ರೂ ಹಣ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ಪತಿ ಶ್ರೀನಿವಾಸ ರಾಜ್ ಪತ್ನಿಯಿಂದ ಬೇರೆ ಇದ್ದುಕೊಂಡೇ ನಿರ್ವಹಣೆಗೆ ಹಣ ಕೊಡುತ್ತಾ ಬಂದಿದ್ದಾರೆ. ಇದೇ ವೇಳೆ ಅರುಂಧತಿ ಆಸ್ತಿಗಾಗಿ ಪಟ್ಟು ಹಿಡಿದಿದ್ದಾರೆ.
ಆಸ್ತಿಗಾಗಿ ಕಳೆದ ಹಲವಾರು ದಿನಗಳಿಂದ ಮನೆಯಲ್ಲಿ ರಂಪಾಟ ಮಾಡುತ್ತಿದ್ದಾರೆಂದು ಮಾವ ಕಂಡೆರಾಮಶೆಟ್ಟಿ ಆರೋಪಿಸಿದ್ದಾರೆ.ಕೆಲವು ದಿನಗಳ ಹಿಂದೆ ತಂದೆಯನ್ನು ನೋಡಲು ಬಳ್ಳಾರಿಗೆ ತೆರಳಿದ್ದ ಅರುಂಧತಿ ನಿನ್ನೆ ಮಧ್ಯರಾತ್ರಿ ಮಕ್ಕಳ ಜೊತೆ ಬಂದು ಗಲಾಟೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಅಲ್ಲದೆ ಟೆರೇಸ್ನಲ್ಲಿದ್ದ ಕೊಠಡಿ ಬಾಗಿಲು ಮುರಿದು ಗೂಂಡಾವರ್ತನೆ ಮಾಡಿದ್ದಾರೆ. ಇವರು ದೌರ್ಜನ್ಯ ಮೊಬೈಲ್ನಲ್ಲಿ ಹಾಗೂ ಸಿಸಿ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಸೊಸೆಯ ಬೆದರಿಕೆಗೆ ಹೆದರಿ ಮನೆಯಿಂದ ಹೊರಬಾರದ ಮಾವ ರಕ್ಷಣೆ ಒದಗಿಸುವಂತೆ ಅಳಲು ತೋಡಿಕೊಂಡಿದ್ದಾರೆ. ಗಂಡಹೆಂಡತಿ ಜಗಳದಲ್ಲಿ ಮಾವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣ ಇದೀಗ ಜಯಪುರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸೊಸೆಯಿಂದ ರಕ್ಷಣೆ ಕೊಡಿಸುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.ಕೊನೆ ದಿನಗಳಲ್ಲಿ ನೆಮ್ಮದಿಯಾಗಿರಲು ಅನುವು ಮಾಡಿಕೊಡುವಂತೆ ಮನವಿ ಮಾಡುತ್ತಿದ್ದಾರೆ.