ಹಾಸನ : ಹಾಸನ ಜಿಲ್ಲೆಯಲ್ಲೂ ಮಳೆ ಆರ್ಭಟ ಜೋರಾಗಿದೆ. ಮಲೆನಾಡು ಭಾಗದ ತಾಲ್ಲೂಕುಗಳಾದ ಸಕಲೇಶಪುರ, ಆಲೂರು, ಬೇಲೂರು ಮತ್ತು ಹಾಸನ ತಾಲ್ಲೂಕುಗಳಲ್ಲಿ ವರ್ಷಧಾರೆ ಭೋರ್ಗರೆಯುತ್ತಿದೆ. ಜೋರು ಮಳೆಯಿಂದಾಗಿ ಕೆಲವು ಜಲಾಶಯ ಭರ್ತಿಯಾಗಿವೆ. ಹಳ್ಳಕೊಳ್ಳ ಮತ್ತು ಕೆರೆಕಟ್ಟೆ ಮೈದುಂಬಿ ಹರಿಯುತ್ತಿವೆ. ಬೇಲೂರಿನ ಯಗಚಿ ಜಲಾಶಯ ಭರ್ತಿಯಾಗಿದ್ದು, ಈಗಾಗಲೇ ಒಂದೂವರೆ ಕ್ಯೂಸೆಕ್ ನೀರನ್ನು ನದಿಯಿಂದ ಹೊರ ಬಿಡಲಾಗುತ್ತಿದೆ. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಿರುವುದರಿಂದ ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ಸೂಚನೆ ನೀಡಲಾಗಿದೆ.
ಇನ್ನು ಸಕಲೇಶಪುರ ತಾಲ್ಲೂಕಿನಲ್ಲಿ ಮಳೆ ಆರ್ಭಟ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಎಷ್ಟೋ ಕಡೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು ಅನೇಕ ಗ್ರಾಮಗಳ ಜನರು ಕತ್ತಲಲ್ಲಿ ದಿನದೂಡುವಂತಾಗಿದೆ. ಅಲ್ಲದೆ ಭಾರಿ ಗಾತ್ರದ ಮರಗಳು ರಸ್ತೆಗೆ ಅಡ್ಡಲಾಗಿ ಬುಡಮೇಲಾಗಿರುವುದರಿಂದ ವಾಹನ ಸವಾರರು ಪರದಾಡಿದ ಘಟನೆಯೂ ನಡೆಯಿತು. ಸಕಲೇಶಪುರ,ಅರಕಲಗೂಡು ಮೊದಲಾದ ಕಡೆಗಳಲ್ಲಿ ಮಳೆಗಾಳಿಗೆ ಮನೆಗಳು ಕುಸಿದಿವೆ. ಕೆಲ ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ.
ಅರಕಲಗೂಡು ತಾಲ್ಲೂಕು ಮರಟ್ಟಿಕಾವಲು ಗ್ರಾಮದಲ್ಲಿ ಮಳೆಗಾಳಿಗೆ ಮುತ್ತಶೆಟ್ಟಿ, ಶೇಖರ್ ಶೆಟ್ಟಿ ಎಂಬುವರ 2 ಮನೆಗಳ ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮತ್ತೊಂದೆಡೆ ಬೇಲೂರು ತಾಲ್ಲೂಕು ಮಾದಿಹಳ್ಳಿ ಹೋಬಳಿಯಲ್ಲಿ ಅಪಾರ ಪ್ರಮಾಣದ ಮೆಕ್ಕೆಜೋಳ ಧರಾಶಾಹಿಯಾಗಿ ಅಪಾರ ನಷ್ಟ ಉಂಟಾಗಿದೆ.ಬೇಲೂರು ತಾಲ್ಲೂಕು ಅಗಸರಹಳ್ಳಿ ಗ್ರಾಮದಲ್ಲಿ ಯಗದಿ ನದಿ ಪ್ರವಾಹಕ್ಕೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವೆ ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಹತ್ತಾರು ಗ್ರಾಮಗಳ ಜನರು ಸಂಪರ್ಕ ಕಡಿದುಕೊಂಡಿದ್ದಾರೆ.
ಕಳೆದ ವರ್ಷವೂ ಹುಚ್ಚು ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆಯನ್ನು ಮತ್ತೆ ರಿಪೇರಿ ಮಾಡಲಾಗಿತ್ತು. ಈ ವರ್ಷವೂ ಮೊದಲ ಮಳೆಗೆ ಸೇತುವೆ ಕೊಚ್ಚಿ ಹೋಗಿದೆ. ಸಂತೋಷದ ವಿಷಯ ಏನೆಂದರೆ ಚಿಕ್ಕಮಗಳೂರು, ಮೂಡಿಗೆರೆ ಭಾಗಗಳಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ದಿಢೀರ್ ಏರಿಕೆಯಾಗಿದೆ. ಜಲಾಶಯಕ್ಕಿಂದು 36,849 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೇಮಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಸಕಲೇಶಪುರ ಪಟ್ಟಣದ ಹೊಳೆ ಮಲ್ಲೇಶ್ವರ ದೇವಾಲಯ ಬಹುತೇಕ ಜಲಾವೃತವಾಗಿದೆ. ಈ ನಡುವೆ ಹೇಮಾವತಿ ನದಿಯಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಆಜಾದ್ ರಸ್ತೆಯ 200ಕ್ಕೂ ಹೆಚ್ಚು ಮನೆಯ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮೈಕ್ ಮೂಲಕ ಅನೌನ್ಸ್ ಮಾಡಿ ಸೂಚಿಸಲಾಗಿದೆ. ಕಳೆದ ವರ್ಷವೂ ಸಕಲೇಶಪುರದ ಆಜಾದ್ ರಸ್ತೆ ಇಡಿಯಾಗಿ ಜಲಾವೃತವಾಗಿತ್ತು.