ಬೆಂಗಳೂರು : ಸಿಲಿಂಡರ್ ಬ್ಲಾಸ್ಟ್ ಆದ ಕಾರಣ ತಾಯಿ ಸೇರಿದಂತೆ ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತಮಿಳು ನಾಡಿನ ಮೂಲದವರಾದ ಮುನಿಯಮ್ಮ ದಂಪತಿ ಮತ್ತು ಮಕ್ಕಳು ಸುಮಾರು 6 ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ಇಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮುನಿಯಮ್ಮನ ಮಗ ಅಭಿಷೇಕ್ ಪಿಯುಸಿ ಓದುತ್ತಿದ್ದನು, ಮಗಳು ನಂದಿನಿ 10ನೇ ತರಗತಿಯಲ್ಲಿ ಓದುತ್ತಿದ್ದಳು.
ಇದನ್ನೂ ಓದಿ : ಸಿ.ಟಿ ರವಿ ಬಂಧನ ಪ್ರಕರಣ : ಖಾನಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಸ್ಪೆಂಡ್ !
ಇಂದು ಎಂದಿನಂತೆ ಏಳು ಗಂಟೆಗೆ ಎದ್ದ ಮುನಿಯಮ್ಮ ಮನೆಯ ಲೈಟ್ ಹಾಕಿದಾಗ ಸಿಲಿಂಡರ್ ಬ್ಲಾಸ್ಟ್ ಆಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಮನೆಯ ಬಾಗಶಃ ಭಾಗ ಸುಟ್ಟು ಹೋಗಿದೆ. ಮನೆಯಲ್ಲಿದ್ದ ಬಹುತೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸದ್ಯ ಮೂವರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಸಂಬಂಧ ಶ್ರೀ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.