ಬೆಂಗಳೂರು : ಸಾಮಾನ್ಯವಾಗಿ ನಾವು ಚಿನ್ನ, ಹಣ, ಮೊಬೈಲ್ಗಳನ್ನು ಕಳ್ಳತನ ಮಾಡುವ ಕಳ್ಳರನ್ನು ನೋಡಿದ್ದೇವೆ. ಆದರೆ ಬೆಂಗಳೂರಿನ ಈ ಏರಿಯಾದಲ್ಲಿರುವ ಜನ ಚಪ್ಪಲಿ ಕಳ್ಳರ ಹಾವಳಿಯಿಂದ ಬೇಸತ್ತು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ, ಬೃಂದಾವನ ಲೇಔಟ್ ನಲ್ಲಿ ಘಟನೆ ನಡೆದಿದ್ದು. ಒಂದೇ ದಿನ ಏರಿಯಾದ ಎರಡ-ಮೂರು ಮನೆಗಳಲ್ಲಿ ಚಪ್ಪಲಿ ಕಳ್ಳತನ ಮಾಡಿದ್ದಾರೆ. ಇದೇ ತಿಂಗಳ ಡಿಸೆಂಬರ್ 22 ಹಾಗೂ 23ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು. ನರಸಿಂಹಮೂರ್ತಿ ಎಂಬುವವರ ಮನೆಯ ಕಾಂಪೌಂಡ್ ಹಾರಿ ಬಂದಿರುವ ಕಳ್ಳರು ಚಪ್ಪಲಿ ಕದಿಯಲು ಪ್ರಯತ್ನಿಸಿದ್ದಾರೆ.
ಆದರೆ ಮನೆಗೆ ಗ್ರಿಲ್ ಇದ್ದ ಕಾರಣ ಚಪ್ಪಲಿ ಕದಿಯಲು ಸಾಧ್ಯವಾಗದೆ ಖದೀಮರು ತೆರಳಿದ್ದಾರೆ. ಮತ್ತೊಂದೆಡೆ ಖದೀಮರು ಚಪ್ಪಲಿಯನ್ನು ಚೀಲದಲ್ಲಿ ತುಂಬಿಕೊಂಡು ಹೋಗುವ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳರ ಎಂಟ್ರಿಯಿಂದ ಏರಿಯಾದ ಜನರು ಭಯಭೀತರಾಗಿದ್ದು. ತಮ್ಮ ಏರಿಯಾದಲ್ಲಿ ಪೊಲೀಸರು ಬೀಟ್ ಮಾಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.