ವದೆಹಲಿ : 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಂತರ ಬಜೆಟ್ ಮಂಡಿಸಿದರು.
2024-25ನೇ ಸಾಲಿಗೆ ಭಾರತದ ಬಂಡವಾಳ ವೆಚ್ಚವನ್ನು ಶೇ.11 ರಷ್ಟು ಹೆಚ್ಚಿಸಿ, 11.11 ಲಕ್ಷ ಕೋಟಿ ರೂ.ಗೆ ಅಥವಾ ಜಿಡಿಪಿಯ ಶೇಕಡಾ 3.4 ಕ್ಕೆ ಹೆಚ್ಚಿಸಿ ಇಲಾಖಾವಾರು ಬಜೆಟ್ಗಳ ಹಂಚಿಕೆಯನ್ನು ಪ್ರಕಟಿಸಿದ್ದಾರೆ. ಮಧ್ಯಂತರ ಬಜೆಟ್ನಲ್ಲಿ ರಕ್ಷಣಾ ಸಚಿವಾಲಯಕ್ಕೆ ಹೆಚ್ಚಿನ ಹಂಚಿಕೆ ನೀಡಿರುವುದು ಖಾತರಿಯಾಗಿದ್ದು, ಕೃಷಿ ಇಲಾಖೆ ಕನಿಷ್ಠ ಪಾಲು ಪಡೆದುಕೊಂಡಿದೆ.
ಎನ್‌ಡಿಎ ನೇತೃತ್ವದ ಎರಡನೇ ಅವಧಿಯ ಕೊನೆಯ ಮಧ್ಯಂತರ ಬಜೆಟ್ ಮಂಡಿಸಿದ ಸಚಿವೆ ನಿರ್ಮಾಲ ಸೀತಾರಾಮನ್, ಸುಮಾರು 55 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡಿದರು. ಕಳೆದ 10 ವರ್ಷಗಳಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು.
ಮುಂದಿನ 10 ವರ್ಷಗಳಲ್ಲಿ ವಿಮಾನ ನಿಲ್ದಾಣಗಳು ದ್ವಿಗುಣಗೊಳಿಸಲಾಗುವುದು. 149 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದರ ಜೊತೆಗೆ, 517 ಹೊಸ ವಿಮಾನ ಮಾರ್ಗಗಳನ್ನು ಸಹ ನಿರ್ಮಾಣವಾಗಲಿವೆ. ಇನ್ನೂ, ರೈಲ್ವೆಯಲ್ಲಿ 40 ಸಾವಿರ ಹಳೆಯ ಬೋಗಿಗಳನ್ನು ವಂದೇ ಭಾರತ್ ಬೋಗಿಗಳನ್ನಾಗಿ ಪರಿವರ್ತಿಸಲಾಗುವುದು, ಇದರಿಂದ ಪ್ರಯಾಣಿಕರ ಸುರಕ್ಷತೆಯೂ ಹೆಚ್ಚಲಿದೆ. ವಿಶೇಷವಾಗಿ ಮೂರು ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗಳನ್ನು ರಚಿಸಲಾಗಿದ್ದು, ಇದು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
1 ಕೋಟಿ ಕುಟುಂಬಗಳಿಗೆ 300 ಯೂನಿಟ್ ಉಚಿತ ವಿದ್ಯುತ್
ಸೋಲಾರ್ ಬಳಕೆಗೆ ಮೋದಿ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಮೇಲ್ಛಾವಣಿ ಸೌರಶಕ್ತಿಯ ಸಹಾಯದಿಂದ 1 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಶೇ.70ರಷ್ಟು ಮನೆಗಳನ್ನು ಮಹಿಳೆಯರ ಹೆಸರಿಗೆ ನೀಡಲಾಗಿದೆ. 1 ಕೋಟಿ ಮಹಿಳೆಯರನ್ನು ಲಖ್ಪತಿ ದೀದಿಯನ್ನಾಗಿ ಮಾಡಲಾಗಿದೆ. ಇದಾದ ನಂತರ 3 ಕೋಟಿ ಮಹಿಳೆಯರನ್ನು ಲಖ್ಪತಿ ದೀದಿಯನ್ನಾಗಿ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
9 ರಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ
9 ರಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ ಹಾಕಲಾಗುವುದು. ಹೈನುಗಾರಿಕೆ ವಲಯಕ್ಕೆ ಉತ್ತೇಜನ ನೀಡಲಾಗುವುದು. ಶೇ.11 ರಷ್ಟು ಹೆಚ್ಚು ಮೂಲಸೌಕರ್ಯಕ್ಕೆ ಖರ್ಚು ಮಾಡಲಾಗುವುದು. ಮಧ್ಯಮ ವರ್ಗದವರಿಗೆ ಹೊಸ ವಸತಿ ಯೋಜನೆ ತರಲಾಗುವುದು. ನೈಸರ್ಗಿಕ ಅನಿಲದ ಆಮದು ಹೆಚ್ಚಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ನ್ಯಾನೊ ಯೂರಿಯಾ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಐದು ಹೊಸ ಆಕ್ವಾ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು. 50 ವರ್ಷಗಳ ಉಚಿತ ಬಡ್ಡಿಗೆ 1 ಲಕ್ಷ ಕೋಟಿ ರೂ.ಗಳ ಬಜೆಟ್ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್
2014ರಲ್ಲಿ ಪ್ರಧಾನಿ ಮೋದಿ ಕೆಲಸ ಆರಂಭಿಸಿದಾಗ ಸಾಕಷ್ಟು ಸವಾಲುಗಳಿದ್ದವು. ಸಾರ್ವಜನಿಕ ಹಿತದೃಷ್ಟಿಯಿಂದ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ನೀಡಲಾಗಿದೆ. ಜನರು ನಮ್ಮನ್ನು 2ನೇ ಬಾರಿಗೆ ಆಡಳಿತ ನಡೆಸಲು ಆಯ್ಕೆ ಮಾಡಿದ್ದಾರೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರದ ಮೂಲಕ ಎಲ್ಲರ ಬೆಂಬಲ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನ ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಅಭೂತಪೂರ್ವ ಬದಲಾವಣೆಯಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವು ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.