ಬೆಂಗಳೂರು : ನಾನು ಅಖಂಡ ಭಾರತದವನು. ಡಿ.ಕೆ. ಸುರೇಶ್ ಜನರ ಅಭಿಪ್ರಾಯ ಹೇಳಿದ್ದಾರೆ. ಜನರ ಭಾವನೆಗೆ ಅನ್ಯಾಯ ಆಗಿದೆ ಎಂದಿದ್ದಾರೆ ಅಷ್ಟೇ ಎಂದು ಸಹೋದರನ ಹೇಳಿಕೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವೆಲ್ಲ ಅಖಂಡ ಭಾರತದವರು. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಎಲ್ಲವೂ ಒಂದೇ. ಉತ್ತರ ಭಾರತಕ್ಕೆ ಸಿಕ್ಕಿರುವುದು ನಮಗೂ ಸಿಗಬೇಕು ಎಂಬುದು ಜನರ ಭಾವನೆ ಎಂದು ಹೇಳಿದರು.
ಸಂಸತ್ ಎದುರು ಧರಣಿ ಮಾಡಲಿ
27 ಜನ ಸಂಸದರು ಏನು ತಂದಿದ್ದಾರೆ ನಮಗೆ..? ಕರ್ನಾಟಕಕ್ಕೆ ಏನು ಗಿಫ್ಟ್ ತಂದಿದ್ದಾರೆ..? ಈಗಲಾದರೂ 27 ಸಂಸದರು ಸಂಸತ್ ಎದುರು ಧರಣಿ ಮಾಡಿ, ನ್ಯಾಯ ಕೊಡಿಸಲಿ. ಹಿಂದಿ ಬೆಲ್ಟ್ಗೆ ಏನೇನು ಸಿಕ್ಕಿದ್ಯೋ ನಮ್ಮ ಹಳ್ಳಿಗಳಿಗೂ ಸಿಗಬೇಕು ಎಂದು ತಿಳಿಸಿದರು.
ಶಿವರಾಂ ವಿರುದ್ಧ ಶಿಸ್ತು ಕ್ರಮ ತಗೋತೀವಿ
ಇದೇ ವೇಳೆ ಮಾಜಿ ಶಾಸಕ ಬಿ. ಶಿವರಾಂಗೆ ಡಿಕೆಶಿ ವಾರ್ನಿಂಗ್ ನೀಡಿದರು. ಬಿ. ಶಿವರಾಂಗೆ ನಾನು ವಾರ್ನ್ ಮಾಡುತ್ತಿದ್ದೇನೆ. ಏನೇ ಇದ್ದರೂ ನಮ್ಮ ಬಳಿ ಮಾತನಾಡಬೇಕು. ಮಾಧ್ಯಮದ ಮುಂದೆ ಹೋಗಿ ಮಾತನಾಡಿದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಿಕೆಶಿ ಎಚ್ಚರಿಕೆಯ ಸಂದೇಶ ರವಾನಿಸಿದರು.