ಬೆಂಗಳೂರು: ಕೇಂದ್ರ ಸರ್ಕಾರ ನಾಳೆ ಮಧ್ಯಂತರ ಬಜೆಟ್ ಮಂಡಿಸಲಿದೆ.ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಮೋದಿ ಸರ್ಕಾರದ ಮಧ್ಯಂತರ ಬಜೆಟ್ ಇದಾಗಿದ್ದು, ಕರ್ನಾಟಕ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಸಂಸತ್ ಭವನದಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ.
ಕರ್ನಾಟಕದ ದೀರ್ಘಕಾಲದ ಯೋಜನೆಗಳಿಗೆ ಅನುದಾನ ಸಿಗುವ ಸಾಧ್ಯತೆ ಇದೆ. ನೀರಾವರಿ ಯೋಜನೆಗಳು, ಹೊಸ ಹೆದ್ದಾರಿ ಯೋಜನೆಗಳು, ಮೆಟ್ರೋ ಮಾರ್ಗ ವಿಸ್ತರಣೆ ಸಂಬಂಧ ಕೆಲ ಬೇಡಿಕೆಗಳನ್ನು ರಾಜ್ಯವು ಕೇಂದ್ರದ ಮುಂದಿಟ್ಟಿದೆ.
ಬೇಡಿಕೆಗಳು
ಸಿಎಂ ಸಿದ್ದರಾಮಯ್ಯ ಫೆ.16ಕ್ಕೆ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಬರಬೇಕಾದ 5,495 ಕೋಟಿ ರೂ. ವಿಶೇಷ ಸಹಾಯನುದಾನ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಆ ಮೂಲಕ ರಾಜ್ಯಕ್ಕೆ ಹೆಚ್ಚಿನ ಅನುದಾನ ಲಭ್ಯವಾಗಲಿದ್ದು, ಹೆಚ್ಚು ಅಭಿವೃದ್ಧಿ ಕಾರ್ಯ ಸಾಧ್ಯವಾಗಲಿದೆ ಎಂಬುದು ರಾಜ್ಯ ಸರ್ಕಾರದ ಬೇಡಿಕೆ.
ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡುವಂತೆ ಕೇಂದ್ರದ ಮುಂದೆ ಮನವಿ ಮಾಡಲಾಗಿದೆ. ಆ ಮೂಲಕ ಯೋಜನಾ ವೆಚ್ಚದ ಶೇ.80 ಅನುದಾನ ಕೇಂದ್ರ ಸರ್ಕಾರ ಭರಿಸಲಿದೆ. ಇದರ ಜೊತೆಗೆ ನೀರಾವರಿ ಯೋಜನೆಗಳಾದ ಮೇಕೆದಾಟು, ಎತ್ತಿನಹೊಳೆ, ಮಹದಾಯಿ ಯೋಜನೆಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಉಳಿದಂತೆ, ರೈಲ್ವೇ ಯೋಜನೆ, ಹೊಸ ರೈಲುಗಳನ್ನು ನೀಡುವಂತೆ ಹಾಗೆಯೇ ಕೇಂದ್ರ ಬಜೆಟ್ನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹೆಚ್ಚಿನ ಅನುದಾನ ಹಾಗೂ ಕೇಂದ್ರದಿಂದ ರಾಜ್ಯದ ತೆರಿಗೆ ಪಾಲು, ಕೇಂದ್ರದ ಸಹಾಯಾನುದಾನ ಹೆಚ್ಚಿಸುವ ಬೇಡಿಕೆ ಇಡಲಾಗಿದೆ.